ಬ್ರಹ್ಮಸೂತ್ರಗಳ ಸರಳಾನುವಾದ, ಪ್ರತಿಪದಾರ್ಥ ಮತ್ತು ತಾತ್ಪರ್ಯ ಅಧ್ಯಾಯ ೧ (ಉಪನಿಷದ್ವಾಕ್ಯಗಳೆಲ್ಲ ಬ್ರಹ್ಮವನ್ನೆ ಹೇಳುವುವೆಂದು ತೋರಿಸುವುದು) ಪಾದ ೧ (ಬ್ರಹ್ಮವನ್ನು ಗುರುತಿಸುವ ಸ್ಪಷ್ಟವಾದ ಮಾತುಗಳುಳ್ಳ ವಾಕ್ಯಗಳ ವಿಚಾರ) ೧. ಜಿಜ್ಞಾಸಾಧಿಕರಣ (ಅಧಿಕಾರಿಯು ಮುಕ್ತಿಗಾಗಿ ಬ್ರಹ್ಮವಿಚಾರವನ್ನು ಮಾಡಬೇಕು) ಸೂತ್ರ ೧. ಅಥಾತೋ ಬ್ರಹ್ಮಜಿಜ್ಞಾಸಾ ★ ಸರಳಾನುವಾದ— ಬ್ರಹ್ಮವಿಚಾರವನ್ನು ಮಾಡಬೇಕು. ★ ಪ್ರತಿಪದಾರ್ಥ— ಅಥ— ಅನಂತರ, ಆಮೇಲೆ, ತತ್ಪಶ್ಚಾತ್, ಆ ಬಳಿಕ, ತದನಂತರ, ತರುವಾಯ. ಅತಃ— ಆದಕಾರಣ, ಆದುದರಿಂದ, ಆದ್ದರಿಂದ, ಹಾಗಾಗಿ, ಹೀಗಾಗಿ, ಅದರಿಂದಾಗಿ, ಇದರಿಂದಾಗಿ, ಇದಕ್ಕೋಸ್ಕರ. ಬ್ರಹ್ಮಜಿಜ್ಞಾಸಾ— ಬ್ರಹ್ಮವನ್ನು ಅರಿತುಕೊಳ್ಳಲು ಬಯಸಬೇಕು, ಇಚ್ಛಿಸಬೇಕು. “ಜ್ಞಾತುಮ್ ಇಚ್ಛಾ ಜಿಜ್ಞಾಸಾ”— ತಿಳಿಯಲು ಇಚ್ಛೆಯೇ (ಹಂಬಲವೇ) ಜಿಜ್ಞಾಸೆಯು. “ಬ್ರಹ್ಮಣಃ ಜಿಜ್ಞಾಸಾ ಬ್ರಹ್ಮಜಿಜ್ಞಾಸಾ”— ಬ್ರಹ್ಮದ ಕುರಿತಾದ ಜಿಜ್ಞಾಸೆಯೇ ಬ್ರಹ್ಮಜಿಜ್ಞಾಸೆಯು. ★ ತಾತ್ಪರ್ಯ— ನಿತ್ಯ-ಅನಿತ್ಯ / ಆತ್ಮ-ಅನಾತ್ಮ / ಸತ್ಯ-ಮಿಥ್ಯಾ ವಸ್ತುವಿವೇಚನೆ, ಇಹ-ಪರ ಸುಖಗಳನ್ನು ಬಯಸದಿರುವುದು, ಇಂದ್ರಿಯ-ಮನೋನಿಗ್ರಹ, ಮೋಕ್ಷಾಕಾಂಕ್ಷೆಗಳೆಂಬ ಸಾಧನಚತುಷ್ಟಯವನ್ನು ಸಂಪಾದಿಸಿಕೊಂಡಮೇಲೆ, ಬ್ರಹ್ಮಜ್ಞಾನದಿಂದಲೇ ಪರಮಪುರುಷಾರ್ಥವಾದ ಮೋಕ್ಷವು ದೊರೆಯುತ್ತದೆಯಾದಕಾರಣ, ಬ್ರಹ್ಮಜಿಜ್ಞಾಸೆಯನ್ನು ಮಾಡಬೇಕು. ೨. ಜನ್ಮಾದ್ಯಧಿಕರಣ (ಬ್ರಹ್ಮದ ಲಕ್ಷಣ) ಸೂತ್ರ ೨. ...
Comments
Post a Comment