ಬ್ರಹ್ಮಸೂತ್ರಗಳ ಸರಳಾನುವಾದ, ಪ್ರತಿಪದಾರ್ಥ ಮತ್ತು ತಾತ್ಪರ್ಯ
ಅಧ್ಯಾಯ ೧
(ಉಪನಿಷದ್ವಾಕ್ಯಗಳೆಲ್ಲ ಬ್ರಹ್ಮವನ್ನೆ ಹೇಳುವುವೆಂದು ತೋರಿಸುವುದು)
ಪಾದ ೧
(ಬ್ರಹ್ಮವನ್ನು ಗುರುತಿಸುವ ಸ್ಪಷ್ಟವಾದ ಮಾತುಗಳುಳ್ಳ ವಾಕ್ಯಗಳ ವಿಚಾರ)
೧. ಜಿಜ್ಞಾಸಾಧಿಕರಣ
(ಅಧಿಕಾರಿಯು ಮುಕ್ತಿಗಾಗಿ ಬ್ರಹ್ಮವಿಚಾರವನ್ನು ಮಾಡಬೇಕು)
ಸೂತ್ರ ೧. ಅಥಾತೋ ಬ್ರಹ್ಮಜಿಜ್ಞಾಸಾ
★ ಸರಳಾನುವಾದ— ಬ್ರಹ್ಮವಿಚಾರವನ್ನು ಮಾಡಬೇಕು.
★ ಪ್ರತಿಪದಾರ್ಥ—
ಅಥ— ಅನಂತರ, ಆಮೇಲೆ, ತತ್ಪಶ್ಚಾತ್, ಆ ಬಳಿಕ, ತದನಂತರ, ತರುವಾಯ.
ಅತಃ— ಆದಕಾರಣ, ಆದುದರಿಂದ, ಆದ್ದರಿಂದ, ಹಾಗಾಗಿ, ಹೀಗಾಗಿ, ಅದರಿಂದಾಗಿ, ಇದರಿಂದಾಗಿ, ಇದಕ್ಕೋಸ್ಕರ.
ಬ್ರಹ್ಮಜಿಜ್ಞಾಸಾ— ಬ್ರಹ್ಮವನ್ನು ಅರಿತುಕೊಳ್ಳಲು ಬಯಸಬೇಕು, ಇಚ್ಛಿಸಬೇಕು. “ಜ್ಞಾತುಮ್ ಇಚ್ಛಾ ಜಿಜ್ಞಾಸಾ”— ತಿಳಿಯಲು ಇಚ್ಛೆಯೇ (ಹಂಬಲವೇ) ಜಿಜ್ಞಾಸೆಯು. “ಬ್ರಹ್ಮಣಃ ಜಿಜ್ಞಾಸಾ ಬ್ರಹ್ಮಜಿಜ್ಞಾಸಾ”— ಬ್ರಹ್ಮದ ಕುರಿತಾದ ಜಿಜ್ಞಾಸೆಯೇ ಬ್ರಹ್ಮಜಿಜ್ಞಾಸೆಯು.
★ ತಾತ್ಪರ್ಯ— ನಿತ್ಯ-ಅನಿತ್ಯ / ಆತ್ಮ-ಅನಾತ್ಮ / ಸತ್ಯ-ಮಿಥ್ಯಾ ವಸ್ತುವಿವೇಚನೆ, ಇಹ-ಪರ ಸುಖಗಳನ್ನು ಬಯಸದಿರುವುದು, ಇಂದ್ರಿಯ-ಮನೋನಿಗ್ರಹ, ಮೋಕ್ಷಾಕಾಂಕ್ಷೆಗಳೆಂಬ ಸಾಧನಚತುಷ್ಟಯವನ್ನು ಸಂಪಾದಿಸಿಕೊಂಡಮೇಲೆ, ಬ್ರಹ್ಮಜ್ಞಾನದಿಂದಲೇ ಪರಮಪುರುಷಾರ್ಥವಾದ ಮೋಕ್ಷವು ದೊರೆಯುತ್ತದೆಯಾದಕಾರಣ, ಬ್ರಹ್ಮಜಿಜ್ಞಾಸೆಯನ್ನು ಮಾಡಬೇಕು.
೨. ಜನ್ಮಾದ್ಯಧಿಕರಣ
(ಬ್ರಹ್ಮದ ಲಕ್ಷಣ)
ಸೂತ್ರ ೨. ಜನ್ಮಾದ್ಯಸ್ಯ ಯತಃ
★ ಸರಳಾನುವಾದ— ಅದು ಜಗತ್ತಿನ ತಾಯಿಬೇರು.
★ ಪ್ರತಿಪದಾರ್ಥ—
ಅಸ್ಯ— ಇದರ
ಜನ್ಮಾದಿ— ಹುಟ್ಟು ಮೊದಲಾದವುಗಳು, ಜನ್ಮಾದಿಗಳು (ಜನ್ಮ + ಆದಿ)
ಯತಃ— ಯಾವುದರಿಂದಲೋ, ಯಾವುದರ ದೆಸೆಯಿಂದಲೋ, ಯಾವ ಕಾರಣದಿಂದಲೋ.
★ ತಾತ್ಪರ್ಯ— ಈ ಜಗತ್ತಿನ ಉತ್ಪತ್ತಿ, ಸ್ಥಿತಿ, ಲಯಗಳು ಯಾವುದರಿಂದ ಆಗುವುವೋ ಅದು ಬ್ರಹ್ಮವು.
೩. ಶಾಸ್ತ್ರಯೋನಿತ್ವಾಧಿಕರಣ
(ಬ್ರಹ್ಮವು ಸರ್ವಜ್ಞವು; ಬ್ರಹ್ಮಕ್ಕೆ ಶಾಸ್ತ್ರವೇ ಪ್ರಮಾಣವು)
ಸೂತ್ರ ೩. ಶಾಸ್ತ್ರಯೋನಿತ್ವಾತ್
★ ಸರಳಾನುವಾದ— ಅದು ಶಾಸ್ತ್ರಗಳಿಂದ ಮಾತ್ರವೇ ತಿಳಿಯಬರುವುದು.
★ ಪ್ರತಿಪದಾರ್ಥ— ಶಾಸ್ತ್ರ + ಯೋನಿತ್ವಾತ್, ಶಾಸ್ತ್ರಸ್ಯ ಯೋನಿತ್ವಾತ್— ಶಾಸ್ತ್ರಕ್ಕೇ ಕಾರಣವಾಗಿರುವುದರಿಂದ.
★ ತಾತ್ಪರ್ಯ— ಶಾಸ್ತ್ರಕ್ಕೇ ಕಾರಣವಾಗಿರುವುದರಿಂದ ಬ್ರಹ್ಮವು ಸರ್ವಜ್ಞವು.
೪. ಸಮನ್ವಯಾಧಿಕರಣ
(ಉಪನಿಷದ್ವಾಕ್ಯಗಳು ಬ್ರಹ್ಮವನ್ನು ನೇರಾಗಿ ಹೇಳುತ್ತವೆ)
ಸೂತ್ರ ೪. ತತ್ತು ಸಮನ್ವಯಾತ್
★ ಸರಳಾನುವಾದ— ಉಪನಿಷತ್ತುಗಳೆಲ್ಲ ಬ್ರಹ್ಮವನ್ನೆ ಹೇಳುತ್ತವೆ.
★ ಪ್ರತಿಪದಾರ್ಥ—
ತು— ಆದರೆ,
ತತ್— ಅದು (ಆ ಬ್ರಹ್ಮವು ಶಾಸ್ತ್ರವೇದ್ಯವು).
ಸಮನ್ವಯಾತ್— (ಎಲ್ಲ ವೇದಾಂತವಾಕ್ಯಾರ್ಥದಲ್ಲಿ) ಸಮನ್ವಯ (ಹೊಂದಾಣಿಕೆ, ಪೂರಕತೆ, ಹೊಂದಿಕೆ) ಇದೆ.
★ ತಾತ್ಪರ್ಯ— ಆದರೆ, ಆ ಬ್ರಹ್ಮವು ವೇದಾಂತಶಾಸ್ತ್ರದಿಂದಲೇ ತಿಳಿಯಬರತಕ್ಕದ್ದು. ಏಕೆಂದರೆ, ವೇದಾಂತ / ಉಪನಿಷತ್ / ಶಾಸ್ತ್ರವಾಕ್ಯಗಳೆಲ್ಲವೂ ಸಮನ್ವಯದಿಂದ ಆ ಬ್ರಹ್ಮವನ್ನೇ ತಾತ್ಪರ್ಯವಾಗಿ ಹೇಳುತ್ತಿರುವುವು.
Comments
Post a Comment