Skip to main content

ಬ್ರಹ್ಮಸೂತ್ರಭಾಷ್ಯಸಮುಚ್ಚಯಃ ೨


ಬ್ರಹ್ಮಸೂತ್ರಭಾಷ್ಯಸಮುಚ್ಚಯಃ ೨
(ರಾಮಕೃಷ್ಣಾಶ್ರಮದ ಸ್ವಾಮೀ ಆದಿದೇವಾನಂದರ "ಬ್ರಹ್ಮಸೂತ್ರಗಳು" ಕೃತಿಯ ಪೀಠಿಕೆಯಿಂದ ಉದ್ಧೃತ)

1.  ಶಾಂಕರ-ಅದ್ವೈತಮತೀಯ ಭಾಷ್ಯಗಳ ಆದ್ಯಪ್ರವರ್ತಕರು—

ಶ್ರೀಶಂಕರಾಚಾರ್ಯರು

   ಈಗ ನಮಗೆ ಸಿಕ್ಕಿರುವ ಭಾಷ್ಯಗಳಲ್ಲಿ ಶ್ರೀಶಂಕರಾಚಾರ್ಯರದು ಅತ್ಯಂತಪ್ರಾಚೀನವಾಗಿದೆ. ಅವರು ಉಪನಿಷತ್ತುಗಳಿಗೂ ಬ್ರಹ್ಮಸೂತ್ರಗಳಿಗೂ ಅದ್ವೈತಪರವಾಗಿ ಭಾಷ್ಯವನ್ನು ಬರೆದಿರುತ್ತಾರೆ. "ಬ್ರಹ್ಮಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ" ಎಂಬುದು ಇವರ ಸಿದ್ಧಾಂತದ ಸ್ವರೂಪವನ್ನು ಸ್ಪಷ್ಟವಾಗಿ ತಿಳಿಸುತ್ತದೆ— "ಬ್ರಹ್ಮವೊಂದೇ ಸತ್ಯ; ಜಗತ್ತು ಮಿಥ್ಯೆ, ಜೀವ ಬ್ರಹ್ಮಕ್ಕಿಂತ ಬೇರೆಯಲ್ಲ". ಚೈತನ್ಯವು ಪರಬ್ರಹ್ಮ, ಅಪರಬ್ರಹ್ಮ ಎಂದು ಎರಡು ವಿಧ. 

   ಎಲ್ಲಿ ಅವಿದ್ಯಾಕೃತವಾದ ನಾಮ-ರೂಪಾದಿ (ವಿಶೇಷ)ಗಳನ್ನು ನಿಷೇಧಿಸಿ ಅಸ್ಥೂಲಾದಿ (ಪ್ರಣವ / ಓಮ್, ತತ್, ಸತ್ ಮುಂತಾದ ಸ್ಥೂಲವಲ್ಲದ  ಸೂಕ್ಷ್ಮ)-ಶಬ್ದಗಳಿಂದ ಬ್ರಹ್ಮನನ್ನು ಉಪದೇಶಿಸಿದೆಯೋ ಅದು ನಿರುಪಾಧಿಕವೂ ನಿರ್ವಿಶೇಷವೂ ಆದ ಪರಬ್ರಹ್ಮ; ಎಲ್ಲಿ ಅದೇ ಬ್ರಹ್ಮವನ್ನು ನಾಮರೂಪಾದಿ-ವಿಶೇಷದಿಂದ ವಿಶಿಷ್ಟವಾಗಿ ಉಪದೇಶಿಸಿದೆಯೋ ಅದು (ಸೋಪಾಧಿಕವೂ ಸವಿಶೇಷವೂ ಆದ) ಅಪರಬ್ರಹ್ಮ. 

"ಯತ್ರಾವಿದ್ಯಾಕೃತನಾಮರೂಪಾದಿವಿಶೇಷಪ್ರತಿಷೇಧಾದಸ್ಥೂಲಾದಿಶಬ್ದೈರ್ಬ್ರಹ್ಮೋಪದಿಶ್ಯತೇ ತತ್ಪರಮ್ | ತದೇವ ಯತ್ರ ನಾಮರೂಪಾದಿವಿಶೇಷೇಣ ಕೇನಚಿದ್ವಿಶಿಷ್ಟಮುಪಾಸನಾಯೋಪದಿಶ್ಯತೇ ...ತದಪರಮ್ ||" 

   ಅಪರಬ್ರಹ್ಮವು ಜಗತ್ತಿನ ಜನ್ಮಾದಿಗಳಿಗೆ ಕಾರಣವಾಗಿರುತ್ತದೆ. ಬ್ರಹ್ಮವು ನಿಜವಾಗಿ ಪರಿಣಮಿಸುವುದಿಲ್ಲ / ಪರಿವರ್ತಿತವಾಗುವುದಿಲ್ಲ. ಅವಿದ್ಯೆಯಿಂದ ನಾಮ-ರೂಪಾದಿ ವೈವಿಧ್ಯವು ಕಂಡುಬರುತ್ತದೆ. ಇದಕ್ಕೆ ವಿವರ್ತವೆಂದು ಹೆಸರು. ಆತ್ಮ-ಅನಾತ್ಮವೆಂಬ ವಿವೇಕವಿಲ್ಲದಿದ್ದರೆ —ಹಗ್ಗವು ಹಾವಿನಂತೆ ತೋರುವ ಹಾಗೆ— ಆತ್ಮವು ಅನಾತ್ಮವಾಗಿಯೂ, ಅನಾತ್ಮವು ಆತ್ಮವಾಗಿಯೂ ತೋರುತ್ತದೆ. ಇದಕ್ಕೆ ಅಧ್ಯಾಸವೆಂದು ಹೆಸರು. 

   ಪಂಡಿತರು ಈ ಅಧ್ಯಾಸವನ್ನು ಅವಿದ್ಯೆಯೆಂದು ತಿಳಿಯುತ್ತಾರೆ; ಅದನ್ನು ವಿವೇಚಿಸಿ ವಸ್ತುಸ್ವರೂಪವನ್ನು ನಿರ್ಧರಿಸುವುದನ್ನೇ ವಿದ್ಯೆಯೆಂದು ಕರೆಯುತ್ತಾರೆ. "ತಮೇತಮೇವಂ ಲಕ್ಷಣಮಧ್ಯಾಸಂ ಪಂಡಿತಾ ಅವಿದ್ಯೇತಿ ಮನ್ಯನ್ತೇ | ತದ್ವಿವೇಕೇನ ಚ ವಸ್ತುಸ್ವರೂಪಾವಧಾರಣಂ ವಿದ್ಯಾಮಾಹುಃ ||" 

  ಅಂತಃಕರಣದಿಂದ ಅವಚ್ಛಿನ್ನವಾದ ಚೈತನ್ಯವೇ ಜೀವಾತ್ಮ. ನಿತ್ಯ-ಶುದ್ಧ-ಬುದ್ಧ-ಮುಕ್ತ-ಸ್ವಭಾವವುಳ್ಳ ಚೈತನ್ಯವು ಕರ್ತೃತ್ವ-ಭೋಕ್ತೃತ್ವ-ಜ್ಞಾತೃತ್ವವೇ ಮೊದಲಾದ ಜೈವ (ಜೀವಿಗೆ ಸಂಬಂಧಿಸಿದ) ಧರ್ಮಗಳಿಂದ ಕೂಡಿದಂತೆ ಕಂಡುಬರುತ್ತದೆ. ಇಂಥ ಜೀವನಿಗೂ ಬ್ರಹ್ಮಕ್ಕೂ ಐಕ್ಯವನ್ನು (ಉಪನಿಷತ್ತಿನ) ತತ್ತ್ವಮಸ್ಯಾದಿ-ವಾಕ್ಯಗಳು ಬೋಧಿಸುತ್ತವೆ. ನಿರ್ಗುಣಬ್ರಹ್ಮೋಪಾಸಕರಿಗೆ ಸಮ್ಯಗ್-ಜ್ಞಾನದಿಂದಲೇ ಬ್ರಹ್ಮಪ್ರಾಪ್ತಿಯಾಗುತ್ತದೆ (ಸದ್ಯೋಮುಕ್ತಿ). ಅವರಿಗೆ ಅರ್ಚಿರಾದಿಗತಿ (ಬೆಳಕಿನ ಮಾರ್ಗ, ಶುಕ್ಲಪಕ್ಷದ ಹಗಲಿನ ದೇವತೆ; ಕ್ರಮಮುಕ್ತಿ, ಉತ್ತರಾಯಣಪಥ) ಇಲ್ಲ. ಆದರೆ ಸಗುಣೋಪಾಸಕನು ಅರ್ಚಿರಾದಿಗತಿಯ ಮೂಲಕ ಬ್ರಹ್ಮಲೋಕವನ್ನು ಸೇರಿ ಅನಂತರ ಆತ್ಯಂತಿಕವಾದ ಮೋಕ್ಷವನ್ನು ಹೊಂದುತ್ತಾನೆ. ಅನೇಕ ಸೂತ್ರಗಳು ಜೀವ, ಈಶ್ವರ, ಉಪಾಸನೆ, ಉತ್ಕ್ರಾಂತಿ— ಇವುಗಳ ಪರವಾಗಿವೆಯೆಂದು ಹೇಳಿದರೆ ತಪ್ಪಾಗಲಾರದು. ಶಾಂಕರಭಾಷ್ಯದ ಪ್ರಕಾರ (ಬ್ರಹ್ಮ)ಸೂತ್ರಗಳು (ಒಟ್ಟು) ೫೫೫.

2. ರಾಮಾನುಜ-ವಿಶಿಷ್ಟಾದ್ವೈತಮತೀಯ ಭಾಷ್ಯಗಳ ಆದ್ಯಪ್ರವರ್ತಕರು—

ಶ್ರೀರಾಮಾನುಜಾಚಾರ್ಯರು

 ಶ್ರೀರಾಮಾನುಜಾಚಾರ್ಯರು ವಿಶಿಷ್ಟಾದ್ವೈತಪರವಾಗಿ ಬ್ರಹ್ಮಸೂತ್ರಗಳಿಗೆ ಭಾಷ್ಯವನ್ನು ಬರೆದಿದ್ದಾರೆ. ಇದು ಶ್ರೀಭಾಷ್ಯವೆಂದು ಪ್ರಸಿದ್ಧವಾಗಿದೆ. ಶ್ರೀಭಾಷ್ಯವನ್ನಲ್ಲದೆ ಇವರು ಬ್ರಹ್ಮಸೂತ್ರಗಳಿಗೆ ವೇದಾಂತದೀಪ, ವೇದಾಂತಸಾರ ಎಂಬ ಸಂಗ್ರಹರೂಪವಾದ ವೃತ್ತಿಗಳನ್ನು ಬರೆದಿದ್ದಾರೆ. ಶ್ರೀಭಾಷ್ಯಕ್ಕೆ ಬೋಧಾಯನವೃತ್ತಿಯು ಮೂಲವಾಗಿದೆ. ಅವರು ಬೋಧಾಯನವೃತ್ತಿಯ ಸಂಗ್ರಹವನ್ನು ಅನುಸರಿಸಿ ವ್ಯಾಖ್ಯಾನಮಾಡಿರುವುದಾಗಿ ತಮ್ಮ ಭಾಷ್ಯಾವತರಣಿಕೆಯಲ್ಲಿಯೇ ಹೇಳಿರುತ್ತಾರೆ— 

"ಭಗವದ್ಬೋಧಾಯನಕೃತಾಂ ವಿಸ್ತೀರ್ಣಾಂ ಬ್ರಹ್ಮಸೂತ್ರವೃತ್ತಿಂ ಪೂರ್ವಾಚಾರ್ಯಾಃ ಸಂಕ್ಷಿಪುಃ ; ತನ್ಮತಾನುಸಾರೇಣ ಸೂತ್ರಾಕ್ಷರಾಣಿ ವ್ಯಾಖ್ಯಾಸ್ಯನ್ತೇ |"

 "ಭಗವಾನ್ ಬೋಧಾಯನರು ವಿಸ್ತಾರವಾಗಿ ಬರೆದ ಬ್ರಹ್ಮಸೂತ್ರ-ವೃತ್ತಿಯನ್ನು ಪೂರ್ವಾಚಾರ್ಯರು ಸಂಕ್ಷೇಪಮಾಡಿದರು; ಅವರ ಮತವನ್ನು ಅನುಸರಿಸಿ ಸೂತ್ರಾಕ್ಷರಗಳು ವ್ಯಾಖ್ಯಾನಿಸಲ್ಪಡುತ್ತವೆ."

  ವಿಶಿಷ್ಟಾದ್ವೈತ ಸಿದ್ಧಾಂತದ ಪ್ರಕಾರ ಈ ಬೋಧಾಯನರೇ (ಶಂಕರರಿಗಿಂತ ಹಿಂದೆ ಸೂತ್ರವೃತ್ತಿಯನ್ನು ಬರೆದ) ಉಪವರ್ಷರು. ಶ್ರೀರಾಮಾನುಜರು ತಮ್ಮ ಭಾಷ್ಯದಲ್ಲಿ ಬೋಧಾಯನವೃತ್ತಿಯ ವಾಕ್ಯಗಳನ್ನು ಉದಾಹರಿಸಿರುವರಲ್ಲದೆ ಛಾಂದೋಗ್ಯೋಪನಿಷತ್ತಿಗೆ ವಾಕ್ಯವೆಂಬ ವ್ಯಾಖ್ಯಾನವನ್ನು ಬರೆದ ಆತ್ರೇಯ-ವಂಶದವರಾದ ಟಂಕಾಚಾರ್ಯರೆಂಬ ಬ್ರಹ್ಮನಂದಿಗಳ ವಾಕ್ಯಗಳನ್ನೂ, ಅದಕ್ಕೆ ಪ್ರಸಿದ್ಧವಾದ ಭಾಷ್ಯವನ್ನೂ ಬರೆದ ದ್ರಮಿಡಾಚಾರ್ಯರ ವಾಕ್ಯಗಳನ್ನೂ ಅಲ್ಲಲ್ಲಿ ಉದಾಹರಿಸುತ್ತಾರೆ. ಶ್ರೀಭಾಷ್ಯದ ಪ್ರಕಾರ ಸೂತ್ರಗಳು ೫೪೫.

      ಚೇತನ (ಆತ್ಮ), ಅಚೇತನ (ಜಡ, ಜಗತ್ತು), ಈಶ್ವರ (ಪರಮಾತ್ಮ)— ಎಂದು ತತ್ತ್ವವು ಮೂರು ಭಾಗವಾಗಿ ವಿಂಗಡಿಸಲ್ಪಟ್ಟಿದೆ. ಈಶ್ವರನಲ್ಲಿಯೇ ಚೇತನ-ಅಚೇತನಗಳು ಸ್ಥಿತಿಯನ್ನು (ಇರುವಿಕೆಯನ್ನು, ಅಸ್ತಿತ್ವವನ್ನು) ಹೊಂದಿವೆ. ಇದೇ ವಿಶಿಷ್ಟಾದ್ವೈತ. ಇಲ್ಲಿ ವಸ್ತುಗಳಿಗೆ ಭೇದವೂ ಅಭೇದವೂ ಸಂರಕ್ಷಿಸಲ್ಪಟ್ಟಿದೆ. ವಿಭುವಾದ ಪರಬ್ರಹ್ಮನು ಅಶೇಷದೋಷರಹಿತನು, ಸರ್ವಕಲ್ಯಾಣಗುಣಗಳುಳ್ಳವನು, ಅಖಿಲಭುವನ-ಜನ್ಮ-ಸ್ಥಿತಿ-ಭಂಗಗಳಿಗೆ ಕಾರಣನು; ಅಪ್ರಾಕೃತ-ದಿವ್ಯ-ಮಂಗಳ-ವಿಗ್ರಹರೂಪನು, ಪರಮಪ್ರಾಪ್ಯನು (ಪಡೆಯಬೇಕಾದುದರಲ್ಲಿ ಶ್ರೇಷ್ಠನು) ಮತ್ತು ಪರಮಪ್ರಾಪಕನು (ಶ್ರೇಷ್ಠವಾದದ್ದರ / ಪರತತ್ತ್ವದ ಪ್ರಾಪ್ತಿಗೆ ಕಾರಣನು). ಇವನು ಸೂಕ್ಷ್ಮರೂಪದಲ್ಲಿ ಚೇತನಾಚೇತನಶಕ್ತಿ-ವಿಶಿಷ್ಟನಾಗಿರುತ್ತಾನೆ; ಇವನೇ ಸ್ಥೂಲರೂಪವನ್ನು ಹೊಂದಿದ ಚೇತನಾಚೇತನಶಕ್ತಿಗಳಿಂದ ವಿಶಿಷ್ಟನಾಗಿರುವುದರಿಂದ ಜಗತ್ತಿಗೆ ಕಾರಣನೆನಿಸಿದ್ದಾನೆ. ಇವನು ಪ್ರಕಾರಿ (ಪ್ರಕೃಷ್ಟವಾಗಿ, ಶ್ರೇಷ್ಠವಾಗಿರುವ ಕಾರಣನು), ಚೇತನಾಚೇತನಗಳು ಇವನ ಪ್ರಕಾರಗಳು. ಜೀವನು ತನ್ನ ಶರೀರಕ್ಕೆ ಆತ್ಮನಾಗಿರುವಂತೆ, ಸಮಸ್ತ ಚೇತನಾಚೇತನಗಳಿಗೆ ಪರಮಾತ್ಮನು ಆತ್ಮನಾಗಿದ್ದಾನೆ. ಈ ದೃಷ್ಟಿಯಿಂದ ಅವನೊಬ್ಬನೇ ಶರೀರಿ; ಚೇತನಾಚೇತನ ವಸ್ತುಗಳಿಂದ ಕೂಡಿದ ಜಗತ್ತು ಅವನ ಶರೀರ; ಸೃಷ್ಟಿಯೇ ಮೊದಲಾದ ವ್ಯಾಪಾರವು ಅವನ ಲೀಲೆ.

ಶರೀರಾದಿ-ವಿಲಕ್ಷಣನಾದ ಜೀವನು ಅಣು-ಪರಿಮಾಣ(ಗಾತ್ರ)ವುಳ್ಳವನು. ಪ್ರತಿಶರೀರದಲ್ಲಿಯೂ ಬೇರೆ ಬೇರೆಯಾಗಿರುತ್ತಾನೆ. ಪ್ರಕೃತಿ-ಸಂಬಂಧದಲ್ಲಿರುವ ಜೀವರು ಬದ್ಧರು; ಪ್ರಕೃತಿಯಿಂದ ಬಿಡಿಸಿಕೊಂಡವರು ಮುಕ್ತರು. ಕೆಲವು ಜೀವರು ಸಂಸಾರಕ್ಕೆ ಬರುವುದೇ ಇಲ್ಲ; ಅವರು ನಿತ್ಯರೆನಿಸುವರು. ಸಂಸಾರಿಜೀವರು ಅರ್ಚಿರಾದಿಗತಿಯಿಂದ (ಬೆಳಕಿನ ಮಾರ್ಗದಿಂದ) ಭಗವತ್ಪ್ರಾಪ್ತಿಯನ್ನು ಹೊಂದುತ್ತಾರೆ. ಈ ಸಂಪ್ರದಾಯದಲ್ಲಿ ನಿತ್ಯನಾರಕಿಗಳಾಗಲೀ ನಿತ್ಯಸಂಸಾರಿಗಳಾಗಲೀ ಇಲ್ಲ; ಎಲ್ಲರೂ ಮೋಕ್ಷಕ್ಕೆ ಅರ್ಹರು. ಸಕಲ ಜೀವಾತ್ಮರಿಗೂ ಕರ್ಮಕೃತವಾದ ಶರೀರಭೇದದ ಹೊರತು ಸ್ವರೂಪದಲ್ಲಿ ಯಾವ ಭೇದವೂ ಇರುವುದಿಲ್ಲ. 

       ಜೀವಾತ್ಮರಿಗೂ ಪರಮಾತ್ಮನಿಗೂ ಕೆಲವು ವಿಷಯಗಳಲ್ಲಿ ಹೊರತು ಉಳಿದ ವಿಷಯಗಳಲ್ಲೆಲ್ಲ ಅತ್ಯಂತ ಸಾಮ್ಯ (ಹೋಲಿಕೆ) ಇರುವುದು. ಪ್ರತಿ ಜೀವಾತ್ಮನ ಗುರಿ ಪರಮಾತ್ಮ-ಸಾಮ್ಯ (ಪರಮಾತ್ಮನಂತಾಗುವುದು) ಎಂಬ ಪರಮಪುರುಷಾರ್ಥ. ಇಂಥ ಪ್ರಾಪ್ತಿಗೆ ಪರಮಾತ್ಮನ ಅನುಗ್ರಹವೇ ಕಾರಣವಾಗಿರುವುದರಿಂದ ಭಕ್ತಿ-ಪ್ರಪತ್ತಿ(ಶರಣಾಗತಿ)ಗಳಿಂದ ಸಾಧನ(ಮಾರ್ಗ)ಗಳು ನಿರೂಪಿಸಲ್ಪಟ್ಟಿವೆ. 

    ಆಧ್ಯಾತ್ಮಿಕ ಜೀವನವು ಕರ್ಮಯೋಗದಿಂದ ಪ್ರಾರಂಭವಾಗುತ್ತದೆ; ಕರ್ಮಯೋಗದ (ಫಲಾಪೇಕ್ಷೆಯಿಲ್ಲದ, ದೊರೆತದ್ದರಲ್ಲಿ ಸಂತೃಪ್ತಿಯುಳ್ಳ ಕರ್ಮದ) ಅನುಷ್ಠಾನದಿಂದ ನಿರ್ಮಲ ಅಂತಃಕರಣವನ್ನು ಪಡೆದ ಮುಮುಕ್ಷುವು (ಮೋಕ್ಷಾಕಾಂಕ್ಷಿಯು) ಜ್ಞಾನಕ್ಕೆ ಅರ್ಹತೆಯನ್ನು ಪಡೆಯುತ್ತಾನೆ. ಆತ್ಮನು ಪ್ರಕೃತಿಗಿಂತ ಭಿನ್ನನೆಂದು ತಿಳಿಯುವುದೇ ಜ್ಞಾನಯೋಗವು. ಕೊನೆಗೆ ಭಕ್ತಿಯೋಗವು ಸಾಧನವಾಗುತ್ತದೆ. ಪರಮಪ್ರೇಮದಿಂದ ಭಗವಂತನನ್ನು ನಿರಂತರವಾಗಿ ಧ್ಯಾನಿಸುವುದೇ ಭಕ್ತಿ. ಭಕ್ತಿಯೋಗಕ್ಕೆ ಅರ್ಹತೆಯನ್ನು ಪಡೆಯದವರಿಗೆ ಪ್ರಪತ್ತಿಯು ಹೆದ್ದಾರಿ (ರಾಜಮಾರ್ಗ) ಆಗಿರುತ್ತದೆ. ಪರಮಪುರುಷನಲ್ಲಿ ಸಂಪೂರ್ಣವಾಗಿ ಶರಣಾಗತಿಯನ್ನು ಮಾಡುವುದೇ ಪ್ರಪತ್ತಿ (ಮಾರ್ಗ). 

Comments

Popular posts from this blog

ಬ್ರಹ್ಮಸೂತ್ರಗಳ ಸರಳಾನುವಾದ, ಪ್ರತಿಪದಾರ್ಥ ಮತ್ತು ತಾತ್ಪರ್ಯ

ಬ್ರಹ್ಮಸೂತ್ರಗಳ ಸರಳಾನುವಾದ, ಪ್ರತಿಪದಾರ್ಥ ಮತ್ತು ತಾತ್ಪರ್ಯ ಅಧ್ಯಾಯ ೧ (ಉಪನಿಷದ್ವಾಕ್ಯಗಳೆಲ್ಲ ಬ್ರಹ್ಮವನ್ನೆ ಹೇಳುವುವೆಂದು ತೋರಿಸುವುದು) ಪಾದ ೧ (ಬ್ರಹ್ಮವನ್ನು ಗುರುತಿಸುವ ಸ್ಪಷ್ಟವಾದ ಮಾತುಗಳುಳ್ಳ ವಾಕ್ಯಗಳ ವಿಚಾರ) ೧. ಜಿಜ್ಞಾಸಾಧಿಕರಣ (ಅಧಿಕಾರಿಯು ಮುಕ್ತಿಗಾಗಿ ಬ್ರಹ್ಮವಿಚಾರವನ್ನು ಮಾಡಬೇಕು) ಸೂತ್ರ ೧. ಅಥಾತೋ ಬ್ರಹ್ಮಜಿಜ್ಞಾಸಾ  ★ ಸರಳಾನುವಾದ— ಬ್ರಹ್ಮವಿಚಾರವನ್ನು ಮಾಡಬೇಕು. ★ ಪ್ರತಿಪದಾರ್ಥ—  ಅಥ— ಅನಂತರ, ಆಮೇಲೆ, ತತ್ಪಶ್ಚಾತ್, ಆ ಬಳಿಕ, ತದನಂತರ, ತರುವಾಯ. ಅತಃ— ಆದಕಾರಣ, ಆದುದರಿಂದ, ಆದ್ದರಿಂದ, ಹಾಗಾಗಿ, ಹೀಗಾಗಿ, ಅದರಿಂದಾಗಿ, ಇದರಿಂದಾಗಿ, ಇದಕ್ಕೋಸ್ಕರ. ಬ್ರಹ್ಮಜಿಜ್ಞಾಸಾ— ಬ್ರಹ್ಮವನ್ನು ಅರಿತುಕೊಳ್ಳಲು ಬಯಸಬೇಕು, ಇಚ್ಛಿಸಬೇಕು. “ಜ್ಞಾತುಮ್ ಇಚ್ಛಾ ಜಿಜ್ಞಾಸಾ”— ತಿಳಿಯಲು ಇಚ್ಛೆಯೇ (ಹಂಬಲವೇ) ಜಿಜ್ಞಾಸೆಯು. “ಬ್ರಹ್ಮಣಃ ಜಿಜ್ಞಾಸಾ ಬ್ರಹ್ಮಜಿಜ್ಞಾಸಾ”— ಬ್ರಹ್ಮದ ಕುರಿತಾದ ಜಿಜ್ಞಾಸೆಯೇ ಬ್ರಹ್ಮಜಿಜ್ಞಾಸೆಯು.  ★ ತಾತ್ಪರ್ಯ— ನಿತ್ಯ-ಅನಿತ್ಯ / ಆತ್ಮ-ಅನಾತ್ಮ / ಸತ್ಯ-ಮಿಥ್ಯಾ ವಸ್ತುವಿವೇಚನೆ, ಇಹ-ಪರ ಸುಖಗಳನ್ನು ಬಯಸದಿರುವುದು, ಇಂದ್ರಿಯ-ಮನೋನಿಗ್ರಹ, ಮೋಕ್ಷಾಕಾಂಕ್ಷೆಗಳೆಂಬ  ಸಾಧನಚತುಷ್ಟಯವನ್ನು ಸಂಪಾದಿಸಿಕೊಂಡಮೇಲೆ, ಬ್ರಹ್ಮಜ್ಞಾನದಿಂದಲೇ ಪರಮಪುರುಷಾರ್ಥವಾದ ಮೋಕ್ಷವು ದೊರೆಯುತ್ತದೆಯಾದಕಾರಣ, ಬ್ರಹ್ಮಜಿಜ್ಞಾಸೆಯನ್ನು ಮಾಡಬೇಕು. ೨. ಜನ್ಮಾದ್ಯಧಿಕರಣ (ಬ್ರಹ್ಮದ ಲಕ್ಷಣ) ಸೂತ್ರ ೨. ...

ಬ್ರಹ್ಮಸೂತ್ರಭಾಷ್ಯಸಮುಚ್ಚಯಃ ೧

ಬ್ರಹ್ಮಸೂತ್ರಭಾಷ್ಯಸಮುಚ್ಚಯಃ ೧ ಶ್ರೀಗಣೇಶಾಯ ನಮಃ ಶ್ರೀಗುರುಭ್ಯೋ ನಮಃ ಓಂ ಪರಬ್ರಹ್ಮಣೇ ನಮಃ ಪ್ರಸ್ತಾವನೆ ಕಪಿಲಮುನಿಗಳ ಸಾಂಖ್ಯ , ಕಣಾದರ ವೈಶೇಷಿಕ , ಪತಂಜಲಿಗಳ ಯೋಗ , ಜೈಮಿನಿಗಳ ಪೂರ್ವಮೀಮಾಂಸೆ (ಕರ್ಮಕಾಂಡ) ಹಾಗೂ ಬಾದರಾಯಣ ವ್ಯಾಸರ ಉತ್ತರಮೀಮಾಂಸೆ (ಜ್ಞಾನೋಪಾಸನಾಕಾಂಡ — ಬಾದರಾಯಣಸೂತ್ರ / ವೇದಾಂತಸೂತ್ರ / ಬ್ರಹ್ಮಸೂತ್ರ / ಶಾರೀರಕಮೀಮಾಂಸಾ)— ಇವು ಆರು, ಸಂಕ್ಷಿಪ್ತವಾಗಿ ಸೂತ್ರರೂಪದಲ್ಲಿರುವ, ಭಾರತೀಯ ತತ್ತ್ವಶಾಸ್ತ್ರದ ಅಡಿಗಲ್ಲುಗಳೆನಿಸಿದ ಷಡ್ದರ್ಶನವೆಂದು ಪ್ರಸಿದ್ಧವಾದವುಗಳಾಗಿವೆ. ಇವುಗಳಲ್ಲಿ ಆರನೆಯದೂ ಕೊನೆಯದೂ ಆಗಿರುವ, ಉಪನಿಷತ್-ಬ್ರಹ್ಮಸೂತ್ರ-ಭಗವದ್ಗೀತೆಗಳೆಂಬ ಪ್ರಸ್ಥಾನತ್ರಯದಲ್ಲೊಂದಾದ ಈ ಬ್ರಹ್ಮಸೂತ್ರವು, ವೇದಸಾರಭೂತವಾಗಿ ವೇದಾಂತವೆನಿಸಿದ ಉಪನಿಷತ್ತಿನ ಸಾರಸರ್ವಸ್ವವಾಗಿರುವುದು. ಹೀಗಾಗಿ ನಾವು ವೇದದ ತಾತ್ಪರ್ಯವನ್ನು ಉಪನಿಷತ್ತಿನಲ್ಲಿಯೂ, ಉಪನಿಷತ್ತಿನ ತಾತ್ಪರ್ಯವನ್ನು ಬ್ರಹ್ಮಸೂತ್ರದಲ್ಲಿಯೂ ಕಾಣಬೇಕು. ಹಾಗಾಗಿಯೇ, ವೇದಾರ್ಥವನ್ನು ಬ್ರಹ್ಮಸೂತ್ರದ ಚೌಕಟ್ಟಿನಲ್ಲಿ ಮನಗಾಣಬೇಕೆಂಬುದು ಪ್ರಾಜ್ಞರ ಮತ. "ಇತಿಹಾಸಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್" ಎಂಬಂತೆ, ಇತಿಹಾಸ-ಪುರಾಣಾದಿಗಳ ಜ್ಞಾನದಿಂದ ವೇದಾರ್ಥವನ್ನು ವಿಸ್ತರಿಸಬೇಕು. ಅದಕ್ಕೋಸ್ಕರ, ವೇದದ ಸಮಗ್ರಜ್ಞಾನವಾಗಬೇಕಿದ್ದರೆ ವೇದದ ಷಡಂಗಗಳ ಅಧ್ಯಯನ, ೪ ಉಪವೇದಗಳ ಅಧ್ಯಯನ, ಉಪನಿಷತ್-ಸ್ಮೃತಿ-ಪುರಾಣ-ಇತಿಹಾಸಗಳ ಅಧ್ಯಯನದೊಂದಿಗೆ ಬ್...

ಸರ್ವದರ್ಶನಸಂಗ್ರಹಃ ೧

ಸರ್ವ-ದರ್ಶನ-ಸಂಗ್ರಹಃ - ೧ ಪೀಠಿಕೆ ದರ್ಶನ ಪದದ ಪರಿಚಯ           “ದೃಶ್ಯತೇ ಅನೇನ ಇತಿ ದರ್ಶನಮ್” — ಇದರಿಂದ ದರ್ಶನವಾಗುತ್ತದೆ, ನೋಡಲ್ಪಡುತ್ತದೆ ಎಂಬುದರಿಂದ ದರ್ಶನ. ಇದಕ್ಕೆ ಲೋಕರೂಢಿಯಲ್ಲಿ ಕಣ್ಣು, ದರ್ಶನೇಂದ್ರಿಯ, ಕನಸು, ಬುದ್ಧಿ, ಉಪಲಬ್ಧಿ / ಪ್ರಾಪ್ತಿ, ದರ್ಪಣ / ಕನ್ನಡಿ ಎಂದರ್ಥ. ಕಳೆದು ಹೋದುದರ ಪುನಃ ದರ್ಶನವಾಯಿತು ಎನ್ನುತ್ತೇವೆ— ಇಲ್ಲಿ ದರ್ಶನಕ್ಕೆ ಉಪಲಬ್ಧಿ / ಪ್ರಾಪ್ತಿ ಎಂದರ್ಥ. ಆದರೆ, ತತ್ತ್ವಶಾಸ್ತ್ರೀಯ ನೆಲೆಯಲ್ಲಿ “ದೃಶ್ಯತೇ ಯಥಾರ್ಥತತ್ತ್ವಮ್ ಅನೇನ ಇತಿ ದರ್ಶನಮ್” — ಇದರಿಂದ ನಿಜವಾದ ತತ್ತ್ವವು ಕಾಣಬರುವುದೆಂಬುದರಿಂದ ಅಂತಹ ಶಾಸ್ತ್ರವು ದರ್ಶನವೆನಿಸುವುದು.  ವೇದದ ಷಡಂಗಗಳು ನಮ್ಮ ಸಂಸ್ಕೃತಿ, ಸಂಪ್ರದಾಯ, ಪರಂಪರೆ, ನಂಬಿಕೆ, ಆಚರಣೆಗಳಿಗೆ ಮೂಲ, ಮಾನವರಚಿತವಲ್ಲದೆ ಅಪೌರುಷೇಯವೆನಿಸಿದ ಭಗವದ್ವಾಣಿಯ ಸಂಗ್ರಹವಾದ ವೇದಗಳು. ಇವು ಋಷಿಗಳ ತಪಸ್ಸಿನ ಸಮಾಧಿಸ್ಥಿತಿಯಲ್ಲಿನ ಅಂತಸ್ಸಾಕ್ಷಿಯಿಂದ ಒಡಮೂಡಿದ ಉದ್ಗಾರಗಳು. ಹಾಗಾಗಿ, ಇವು ಆ ಮಟ್ಟದ ಮನಃಸ್ಥಿತಿಯವರಿಗೆ ಮಾತ್ರ ಅರ್ಥವಾಗಬಲ್ಲವು. ಜನಸಾಮಾನ್ಯರಿಗೆ ತಿಳಿಯಲು ಕಠಿಣ. ಹಾಗಾಗಿ, ೪ ವೇದಗಳನ್ನರ್ಥೈಸಲು, ಶಿಕ್ಷಾ(phonetics / ಉಚ್ಚಾರಣಾವಿಧಾನಶಾಸ್ತ್ರ ಹಾಗೂ ವೇದದ ಪ್ರತಿ ಶಾಖೆಗೂ ಪ್ರಾತಿಶಾಖ್ಯಗಳು)— ವ್ಯಾಕರಣ(ಪ್ರಕೃತಿ-ಪ್ರತ್ಯಯ-ಸಂಧಿ-ಸಮಾಸ-ವಾಕ್ಯರಚನೆ ಮೊದಲಾದ ಭಾಷಾನಿಯಮಶಾಸ್ತ್ರ)— ಛಂದ...