Skip to main content

ಸರ್ವದರ್ಶನಸಂಗ್ರಹಃ ೧

ಸರ್ವ-ದರ್ಶನ-ಸಂಗ್ರಹಃ - ೧

ಪೀಠಿಕೆ

ದರ್ಶನ ಪದದ ಪರಿಚಯ

         “ದೃಶ್ಯತೇ ಅನೇನ ಇತಿ ದರ್ಶನಮ್”— ಇದರಿಂದ ದರ್ಶನವಾಗುತ್ತದೆ, ನೋಡಲ್ಪಡುತ್ತದೆ ಎಂಬುದರಿಂದ ದರ್ಶನ. ಇದಕ್ಕೆ ಲೋಕರೂಢಿಯಲ್ಲಿ ಕಣ್ಣು, ದರ್ಶನೇಂದ್ರಿಯ, ಕನಸು, ಬುದ್ಧಿ, ಉಪಲಬ್ಧಿ / ಪ್ರಾಪ್ತಿ, ದರ್ಪಣ / ಕನ್ನಡಿ ಎಂದರ್ಥ. ಕಳೆದು ಹೋದುದರ ಪುನಃ ದರ್ಶನವಾಯಿತು ಎನ್ನುತ್ತೇವೆ— ಇಲ್ಲಿ ದರ್ಶನಕ್ಕೆ ಉಪಲಬ್ಧಿ / ಪ್ರಾಪ್ತಿ ಎಂದರ್ಥ. ಆದರೆ, ತತ್ತ್ವಶಾಸ್ತ್ರೀಯ ನೆಲೆಯಲ್ಲಿ “ದೃಶ್ಯತೇ ಯಥಾರ್ಥತತ್ತ್ವಮ್ ಅನೇನ ಇತಿ ದರ್ಶನಮ್”— ಇದರಿಂದ ನಿಜವಾದ ತತ್ತ್ವವು ಕಾಣಬರುವುದೆಂಬುದರಿಂದ ಅಂತಹ ಶಾಸ್ತ್ರವು ದರ್ಶನವೆನಿಸುವುದು. 

ವೇದದ ಷಡಂಗಗಳು

ನಮ್ಮ ಸಂಸ್ಕೃತಿ, ಸಂಪ್ರದಾಯ, ಪರಂಪರೆ, ನಂಬಿಕೆ, ಆಚರಣೆಗಳಿಗೆ ಮೂಲ, ಮಾನವರಚಿತವಲ್ಲದೆ ಅಪೌರುಷೇಯವೆನಿಸಿದ ಭಗವದ್ವಾಣಿಯ ಸಂಗ್ರಹವಾದ ವೇದಗಳು. ಇವು ಋಷಿಗಳ ತಪಸ್ಸಿನ ಸಮಾಧಿಸ್ಥಿತಿಯಲ್ಲಿನ ಅಂತಸ್ಸಾಕ್ಷಿಯಿಂದ ಒಡಮೂಡಿದ ಉದ್ಗಾರಗಳು. ಹಾಗಾಗಿ, ಇವು ಆ ಮಟ್ಟದ ಮನಃಸ್ಥಿತಿಯವರಿಗೆ ಮಾತ್ರ ಅರ್ಥವಾಗಬಲ್ಲವು. ಜನಸಾಮಾನ್ಯರಿಗೆ ತಿಳಿಯಲು ಕಠಿಣ. ಹಾಗಾಗಿ, ೪ ವೇದಗಳನ್ನರ್ಥೈಸಲು, ಶಿಕ್ಷಾ(phonetics / ಉಚ್ಚಾರಣಾವಿಧಾನಶಾಸ್ತ್ರ ಹಾಗೂ ವೇದದ ಪ್ರತಿ ಶಾಖೆಗೂ ಪ್ರಾತಿಶಾಖ್ಯಗಳು)— ವ್ಯಾಕರಣ(ಪ್ರಕೃತಿ-ಪ್ರತ್ಯಯ-ಸಂಧಿ-ಸಮಾಸ-ವಾಕ್ಯರಚನೆ ಮೊದಲಾದ ಭಾಷಾನಿಯಮಶಾಸ್ತ್ರ)— ಛಂದಸ್ಸು(ಗಣ, ಮಾತ್ರೆ, ವೃತ್ತಗಳ ಶಾಸ್ತ್ರ)— ನಿರುಕ್ತ(ವೈದಿಕಶಬ್ದಗಳ ವ್ಯುತ್ಪತ್ತಿ, ನಿರ್ವಚನ, ಅರ್ಥವಿವರಣಾ ಶಾಸ್ತ್ರ; ವೈದಿಕ ನಿಘಂಟು)— ಜ್ಯೌತಿಷ(ವೇದೋಕ್ತ ಕರ್ಮಾಚರಣೆಗೆ ಬೇಕಾದ ಶುಭಮುಹೂರ್ತದ ತಿಥಿ, ವಾರ, ನಕ್ಷತ್ರ, ಯೋಗ, ಕರಣಾದಿಗಳ ಶಾಸ್ತ್ರ)— ಕಲ್ಪ(ವೇದೋಕ್ತ ಕರ್ಮಾಚರಣಾ ವಿಧಾನಗಳ ಸೂತ್ರರೂಪದ ಶಾಸ್ತ್ರ; ೪ ವಿಧ— ಶ್ರೌತ, ಧರ್ಮ, ಗೃಹ್ಯ, ಶುಲ್ಬಸೂತ್ರಗಳು)ಗಳೆಂಬ ೬ ವೇದಾಂಗಗಳು ಋಷಿಮುನಿಗಳಿಂದ, ಜ್ಞಾನಿಗಳಿಂದ ನಿರ್ಮಾಣವಾದವು.

ಶಿಕ್ಷಾ ವ್ಯಾಕರಣಂ ಛಂದೋ ನಿರುಕ್ತಂ ಜ್ಯೋತಿಷಂ ತಥಾ |
ಕಲ್ಪಶ್ಚೇತಿ ಷಡಂಗಾನಿ ವೇದಸ್ಯಾಹುರ್ಮನೀಷಿಣಃ ||

ಉಪವೇದಗಳು

 ೪ ವೇದಗಳಿಗೆ ಒಂದೊಂದು ಉಪವೇದಗಳು ಕ್ರಮವಾಗಿ ಆಯುರ್ವೇದ-ಧನುರ್ವೇದ-ಗಾಂಧರ್ವವೇದ- ಸ್ಥಾಪತ್ಯವೇದ (/ ಅರ್ಥಶಾಸ್ತ್ರ)ಗಳೆಂಬ ವೈದ್ಯಕೀಯ-ಯುದ್ಧಸಂಬಂಧಿ-ಸಂಗೀತ- ವಾಸ್ತುಶಿಲ್ಪ (/ವಿತ್ತೀಯ) ಶಾಸ್ತ್ರಗಳು ಉದಯಿಸಿದವು. ಹೀಗೆ ಚತುರ್ವೇದಗಳ, ವೇದದ ಷಡಂಗಗಳ, ಚತುರುಪವೇದಗಳಂತೆಯೇ, ನಾನಾ ಸ್ಮೃತಿ-ಉಪಸ್ಮೃತಿಗಳ (ಧರ್ಮಶಾಸ್ತ್ರಗಳ), ಪುರಾಣೋಪಪುರಾಣಗಳ ರಚನೆಯಾಯಿತು.

ಧರ್ಮಶಾಸ್ತ್ರಗಳು / ಸ್ಮೃತಿಗಳು

ಮನ್ವತ್ರಿವಿಷ್ಣುಹಾರೀತಾ ಯಾಜ್ಞವಲ್ಕ್ಯೋಶನಾಂಗಿರಾಃ |
ಯಮಾಪಸ್ತಂಬಸಂವರ್ತಾಃ ಕಾತ್ಯಾಯನಬೃಹಸ್ಪತೀ ||
ಪರಾಶರವ್ಯಾಸಶಂಖಲಿಖಿತಾ ದಕ್ಷಗೌತಮೌ |
ಶಾತಾತಪೋ ವಸಿಷ್ಠಶ್ಚ ಧರ್ಮಶಾಸ್ತ್ರಪ್ರವರ್ತಕಾಃ ||
(ಸರ್ವಮತಸಂಗ್ರಹ)
ಮನು, ಅತ್ರಿ, ವಿಷ್ಣು, ಹಾರೀತ, ಯಾಜ್ಞವಲ್ಕ್ಯ, ಉಶನಸ್(ಶುಕ್ರ), ಅಂಗೀರಸ, ಯಮ, ಆಪಸ್ತಂಬ, ಸಂವರ್ತ, ಕಾತ್ಯಾಯನ, ಬೃಹಸ್ಪತಿ, ಪರಾಶರ, ವ್ಯಾಸ, ಶಂಖ, ಲಿಖಿತ, ದಕ್ಷ, ಗೌತಮ, ಶಾತಾತಪ, ವಸಿಷ್ಠ ಎಂಬ ೨೦ ಮಹರ್ಷಿಗಳು ಧರ್ಮಶಾಸ್ತ್ರ ಪ್ರವರ್ತಕರು / ಸ್ಮೃತಿಕಾರರು.

ಪುರಾಣಗಳು

ದಶಧಾ ಚಾಷ್ಟಧಾ ಚೈತತ್ ಪುರಾಣಮುಪದಿಶ್ಯತೇ |
ಬ್ರಾಹ್ಮಂ ಪಾದ್ಮಂ ವೈಷ್ಣವಂ ಚ ಶೈವಂ ಭಾಗವತಂ ತಥಾ ||
ಭವಿಷ್ಯನ್ನಾರದೀಯಂ ಚ ಮಾರ್ಕಂಡೇಯಮತಃ ಪರಮ್ |
ಆಗ್ನೇಯಂ ಬ್ರಹ್ಮವೈವರ್ತಂ ಲೈಂಗಂ ವಾರಾಹಮೇವ ಚ ||
ಸ್ಕಾಂದಂ ಚ ವಾಮನಂ ಚೈವ ಕೌರ್ಮಂ ಮಾತ್ಸ್ಯಂ ಚ ಗಾರುಡಮ್ |
ಬ್ರಹ್ಮಾಂಡಂ ಚೇತಿ ಪುಣ್ಯೋऽಯಂ ಪುರಾಣಾನಾಮನುಕ್ರಮಃ ||
(ಸರ್ವಮತಸಂಗ್ರಹ)
ಮ-ದ್ವಯಂ ಭ-ದ್ವಯಂ ಚೈವ ಬ್ರ-ತ್ರಯಂ ವ-ಚತುಷ್ಟಯಮ್ |
ಅ-ನಾ-ಪ-ಲಿಂ-ಗ-ಕೂ-ಸ್ಕಾನಿ ಪುರಾಣಾನಿ ಪ್ರಚಕ್ಷತೇ ||

ಮಹಾಪುರಾಣಗಳು ೧೮ ವಿಧ. ಮಕಾರಾದಿಯಾದ ೨— ಮತ್ಸ್ಯ, ಮಾರ್ಕಂಡೇಯ; ಭಕಾರಾದಿಯಾದ ೨— ಭವಿಷ್ಯ, ಭಾಗವತ; ಬ್ರ-ಆದಿಯಾದ ೩— ಬ್ರಹ್ಮ, ಬ್ರಹ್ಮವೈವರ್ತ, ಬ್ರಹ್ಮಾಂಡ; ವಕಾರಾದಿಯಾದ ೪— ವರಾಹ, ವಾಮನ, ವಾಯು, ವಿಷ್ಣು; ಬಳಿಕ, ಅಗ್ನಿ, ನಾರದ, ಪದ್ಮ, ಲಿಂಗ, ಗರುಡ, ಕೂರ್ಮ ಮತ್ತು ಸ್ಕಂದ— ಇವು ಪುಣ್ಯತಮವಾದ ಅಷ್ಟಾದಶ ಪುರಾಣಗಳು.

ದರ್ಶನಗಳು (ತತ್ತ್ವದರ್ಶನಗಳು)

  ದರ್ಶನಗಳೆಂದರೆ ತತ್ತ್ವಪ್ರತಿಪಾದಕ ಶಾಸ್ತ್ರಗಳು. ಇವುಗಳಲ್ಲಿ ಸಾಮಾನ್ಯವಾಗಿ ತತ್ತ್ವವಿಚಾರವೇ ಪ್ರಧಾನವಾಗಿರುತ್ತವೆ. ವಾಸ್ತವಿಕ ಅಂಶಗಳನ್ನು ಯುಕ್ತಿಯುಕ್ತವಾಗಿ ಪ್ರತಿಪಾದಿಸುವುದೇ ದರ್ಶನಗಳ ಗುರಿ. ಇವುಗಳಲ್ಲಿ, ಯಾವುದೋ ಒಂದು ದೇವತೆಯ ಪಾರಮ್ಯವನ್ನು ಪ್ರತಿಪಾದಿಸುವ ಅಂಶವು ವಿರಳ.
 ಧರ್ಮಸೂಕ್ಷ್ಮಗಳಿಗೆ ಸಂಬಂಧಿಸಿ ವೇದಗಳು ಶ್ರುತಿಪ್ರಸ್ಥಾನವಾಗಿ ಮೂಲಪ್ರಮಾಣವಾದರೆ, ಸ್ಮೃತಿಪ್ರಸ್ಥಾನವು ನಂತರ ಹಾಗೂ ಪುರಾಣಪ್ರಸ್ಥಾನವು ಬಳಿಕದ ಪ್ರಮಾಣಗ್ರಂಥಗಳಾದವು. ಈ ನಡುವೆ, ಪೂರ್ವಸೂರಿಗಳು ತತ್ತ್ವಾನ್ವೇಷಣೆಗೆ ತೊಡಗಿ, ಜಡಸೃಷ್ಟಿ-ಜೀವ-ಈಶ್ವರರ ಬಗೆಗಿನ ವಿವಿಧ ದೃಷ್ಟಿಕೋನಗಳುಳ್ಳ ಶಾಸ್ತ್ರಗಳನ್ನು, ತಮ್ಮ ತರ್ಕ, ಊಹೆ, ಅನುಭವ, ವೇದಜ್ಞಾನ ಮುಂತಾದವುಗಳ ಮಥನದಿಂದ ತತ್ತ್ವದರ್ಶನ ಪಡೆದು ರಚಿಸಿದ್ದೇ “ಷಡ್ದರ್ಶನಗಳು” ಎನಿಸಿದವು. ಹೀಗೆ ಮುಖ್ಯವಾಗಿ  ೬ ಆಸ್ತಿಕ ದರ್ಶನಗಳು ಸೂತ್ರರೂಪದಲ್ಲಿ ವಿರಚಿತವಾದವು.

ಕಣಾದಸ್ಯಾಕ್ಷಪಾದಸ್ಯ ವ್ಯಾಸಸ್ಯ ಕಪಿಲಸ್ಯ ಚ |
ಪತಂಜಲೇರ್ಜೈಮಿನೇಶ್ಚ ದರ್ಶನಾನಿ ಷಡೇವ ಹಿ ||
(—ಪರಾಶರಮಾಧವೀಯೇ ಬೋಧಾಯನೀಯ ಪುರಾಣಸಾರವಚನಮ್)

೧) ಕಪಿಲಮುನಿಯ ಸಾಂಖ್ಯ
೨) ಕಣಾದಮಹರ್ಷಿಯ ವೈಶೇಷಿಕ
೩) ಗೌತಮ (ಅಕ್ಷಪಾದ)ಮುನಿಯ ನ್ಯಾಯ
೪) ಪತಂಜಲಿಮಹರ್ಷಿಯ (ಅಷ್ಟಾಂಗ)ಯೋಗ
೫) ಜೈಮಿನಿಗಳ ಪೂರ್ವ(ಕರ್ಮ)ಮೀಮಾಂಸಾ 
೬) ವ್ಯಾಸರ ಉತ್ತರಮೀಮಾಂಸಾ (ವೇದಾಂತ / ಬ್ರಹ್ಮಸೂತ್ರಗಳು)

ದರ್ಶನಗಳಲ್ಲಿ ವೇದಪ್ರಾಮಾಣ್ಯವನ್ನೊಪ್ಪುವ ವೈದಿಕ (ಆಸ್ತಿಕ) ದರ್ಶನಗಳು ಹಾಗೂ ವೇದವನ್ನೊಪ್ಪದ ಅವೈದಿಕ (ನಾಸ್ತಿಕ) ದರ್ಶನಗಳೆಂದು ೨ ವಿಧ. “ನಾಸ್ತಿಕೋ ವೇದನಿಂದಕಃ” ಎಂಬ ಮಾತು ವೇದಪ್ರಮಾಣವನ್ನೊಪ್ಪದವ ನಾಸ್ತಿಕನೆಂಬುದನ್ನು ಸಮರ್ಥಿಸುವ ಆಧಾರವಾಗಿದೆ. 
         ಆರು ನಾಸ್ತಿಕದರ್ಶನಗಳು ಇಂತಿವೆ—
ಚಾರ್ವಾಕಾರ್ಹತಬೌದ್ಧಾಸ್ತು ಬೌದ್ಧೇ ಮಾಧ್ಯಮಿಕಂ ತಥಾ |
ಯೋಗಾಚಾರಂ ಸೌತ್ರಾಂತಿಕಂ ವೈಭಾಷಿಕಮವೈದಿಕಾಃ ||
೧) ಬೃಹಸ್ಪತಿಯ ಅನುಯಾಯಿಯಾದ ಚಾರ್ವಾಕಪ್ರಣೀತ ಲೋಕಾಯತ
೨) ಅರ್ಹತ / ಜೈನ
೩) ಬೌದ್ಧ— ಮಾಧ್ಯಮಿಕ
೪) ಬೌದ್ಧ— ಯೋಗಾಚಾರ
೫) ಬೌದ್ಧ— ಸೌತ್ರಾಂತಿಕ
೬) ಬೌದ್ಧ— ವೈಭಾಷಿಕ


ಮತಗಳು (ಭಕ್ತಿದರ್ಶನಗಳು)

      ಮತಗಳೆಂದರೆ ಆಚಾರ / ಭಕ್ತಿ - ಪ್ರತಿಪಾದಕ ಶಾಸ್ತ್ರಗಳು. ಭಕ್ತಿಮಾರ್ಗದಲ್ಲಿ ತಮಗಿಷ್ಟವಾದ ದೇವತೆಯೇ ಪ್ರಧಾನವಾದದ್ದು. ಆ ದೇವತೆಯನ್ನು ಪ್ರತಿಪಾದಿಸುವ ಶ್ರುತಿ, ಪುರಾಣ, ಇತಿಹಾಸಗಳೇ ಇವುಗಳಿಗೆ ಪ್ರಮಾಣಭೂತ ಗ್ರಂಥಗಳೆಂದು ಹೇಳಲಾಗಿರುತ್ತದೆ.

ಶೈವಂ ಚ ವೈಷ್ಣವಂ ಶಾಕ್ತಂ ಸೌರಂ ವೈನಾಯಕಂ ತಥಾ |
ಸ್ಕಾನ್ದಂ ಚ ಭಕ್ತಿಮಾರ್ಗಸ್ಯ ದರ್ಶನಾನಿ ಷಡೇವ ಹಿ ||
(—ಪರಾಶರಮಾಧವೀಯೇ ಬೋಧಾಯನೀಯ ಪುರಾಣಸಾರವಚನಮ್)

       ಶೈವ, ವೈಷ್ಣವ, ಶಾಕ್ತ, ಸೌರ, ಗಾಣಪತ, ಸ್ಕಾಂದಗಳೆಂಬ ೬ ಪಂಥಗಳು ಕ್ರಮವಾಗಿ ಶಿವ, ವಿಷ್ಣು, ಶಕ್ತಿ / ದೇವಿ, ಸೂರ್ಯ, ಗಣಪತಿ, ಸುಬ್ರಹ್ಮಣ್ಯರನ್ನೇ ಪರದೈವವೆಂದು ಸಾರುವ ಭಕ್ತಿಮಾರ್ಗದ ೬ ವಿಭಿನ್ನ ಪಂಥಗಳು / ದರ್ಶನಗಳೆಂದು ಹೇಳಲಾಗಿದೆ.

ಅಷ್ಟಾದಶ-ವಿದ್ಯಾಸ್ಥಾನಗಳು

      ಅಂಗಾನಿ ವೇದಾಶ್ಚತ್ವಾರೋ ಮೀಮಾಂಸಾ ನ್ಯಾಯವಿಸ್ತರಃ |
ಪುರಾಣಂ ಧರ್ಮಶಾಸ್ತ್ರಂ ಚ ವಿದ್ಯಾ ಹ್ಯೇತಾಶ್ಚತುರ್ದಶ ||
ಆಯುರ್ವೇದೋ ಧನುರ್ವೇದೋ ಗಾನ್ಧರ್ವಶ್ಚೇತ್ಯನುಕ್ರಮಾತ್ |
ಅರ್ಥಶಾಸ್ತ್ರಂ ಪರಂ ತಸ್ಮಾದ್ವಿದ್ಯಾಸ್ತ್ವಷ್ಟಾದಶ ಸ್ಮೃತಾಃ ||
(ಸರ್ವಮತಸಂಗ್ರಹ)

         ವೇದಾಂಗಗಳು ೬, ವೇದಗಳು ೪, ಮೀಮಾಂಸಾಶಾಸ್ತ್ರ, ನ್ಯಾಯಶಾಸ್ತ್ರ, ಪುರಾಣಗಳು, ಧರ್ಮಶಾಸ್ತ್ರಗಳು (ಸ್ಮೃತಿಗಳು)— ಇವು ೧೪ / ಚತುರ್ದಶ ವಿದ್ಯೆಗಳು. ಇವುಗಳೊಂದಿಗೆ ೪ ಉಪವೇದಗಳು ಸೇರಿ ಒಟ್ಟು ೧೮ ವಿದ್ಯಾಸ್ಥಾನಗಳೆನ್ನಲಾಗಿದೆ.

ಶಾಸ್ತ್ರಶಬ್ದದ ಪರಿಚಯ


“ಶಾಸನಾತ್ ಶಂಸನಾತ್ ಶಾಸ್ತ್ರಂ ಶಾಸ್ತ್ರಮಿತ್ಯಭಿಧೀಯತೇ”— ಎಂಬ ಆಗಮದ ವಾಕ್ಯದಂತೆ, “ಹೀಗೇ ಮಾಡಬೇಕು, ಹೀಗೆ ಮಾಡಬಾರದು” ಎಂಬ ಶಾಸನ / ಕಾನೂನು ರೀತಿಯ ವಿಧಿ-ನಿಷೇಧಗಳನ್ನು ಹೇಳುವ / ವಿಧಿಸುವ / ಆಜ್ಞಾಪಿಸುವ ಗ್ರಂಥಗಳೇ ಶಾಸ್ತ್ರಗಳು. “ಶಾಸ್ ಅನುಶಿಷ್ಟೌ” ಎಂಬ ಶಾಸನ, ಆಜ್ಞೆಮಾಡು ಎಂಬರ್ಥದ “ಶಾಸ್” ಧಾತುವಿನಿಂದ ನಿಷ್ಪನ್ನವಾಗಿದೆ ಶಾಸ್ತ್ರಶಬ್ದ. ಹಾಗೆಯೇ, ಇದರ ಇನ್ನೊಂದು ಆಯಾಮದಲ್ಲಿ, “ಶಂಸ್ ಸ್ತುತೌ” ಎಂಬ ವರ್ಣನೆ ಮಾಡು, ಹೊಗಳು, ಸ್ತುತಿ ಮಾಡು ಎಂಬರ್ಥದ “ಶಂಸ್” ಧಾತುವಿನಿಂದ ಶಾಸ್ತ್ರಶಬ್ದವು ಹುಟ್ಟಿದೆ. ಅಂದರೆ, ಶಾಸ್ತ್ರಗಳು ವಿಧಿ-ನಿಷೇಧಗಳನ್ನು ವರ್ಣನಾತ್ಮಕವಾಗಿ ತಿಳಿಸುತ್ತವೆ ಅಥವಾ ತತ್ತ್ವಗಳನ್ನು ವರ್ಣಿಸುತ್ತಾ ಪ್ರಶಂಸಿಸುತ್ತವೆ, ಸತ್ಯ ಸಂಗತಿಯಾದ ನಿತ್ಯತತ್ತ್ವಗಳನ್ನು ಪ್ರತಿಪಾದಿಸುತ್ತವೆ.

ಮೂರು ರೀತಿಯ ಶಾಸ್ತ್ರಗಳಿವೆ— ಪ್ರಭುಸಮ್ಮಿತ, ಮಿತ್ರಸಮ್ಮಿತ ಹಾಗೂ ಕಾಂತಾಸಮ್ಮಿತ ಎಂಬುದಾಗಿ. ರಾಜಶಾಸನದಂತೆ ಧರ್ಮ-ಕರ್ಮಗಳನ್ನು ವಿಧಿಸುವ ವೇದಗಳು, ವೇದಾಂಗಗಳು, ಸ್ಮೃತಿಗಳು ಪ್ರಭುಸಮ್ಮಿತ. ರಾಮಾಯಣ-ಮಹಾಭಾರತದಂತಹ ಇತಿಹಾಸಗಳು ಹಾಗೂ ಪುರಾಣಾದಿಗಳು ಮಿತ್ರನು ಸಲಹೆ ನೀಡುವಂತೆ ಹೇಳುವುದರಿಂದ ಮಿತ್ರಸಮ್ಮಿತ. ಕಾಳಿದಾಸಾದಿ ಮಹಾಕವಿಗಳ ನೀತಿಯುತಕಾವ್ಯಗಳು, ಸುಭಾಷಿತಸಾಹಿತ್ಯಾದಿಗಳು ಪತ್ನಿಯು ಪ್ರೀತಿಯಿಂದ, ಪ್ರೇಮದಿಂದ ರಮಿಸಿ ತಿಳಿಹೇಳುವಂತೆ ರಮ್ಯವಾಗಿ ವರ್ಣಿಸುವುದರಿಂದ ಕಾಂತಾಸಮ್ಮಿತ ಶಾಸ್ತ್ರಗಳೆನಿಸಿವೆ.
   
      ದರ್ಶನಗಳು ಪರಮಾತ್ಮ-ಜೀವಾತ್ಮ-ಪ್ರಕೃತಿಗಳ ನಡುವಿನ ಸಂಬಂಧಗಳನ್ನು, ಅವುಗಳ ಮೂಲಸ್ವರೂಪಗಳನ್ನು ತಮ್ಮದೇ ಪ್ರಮಾಣಗಳ ಮೂಲಕ ಸಾಧಿಸಿವೆ. ಇವುಗಳ ಸಾರವನ್ನು ಸಂಗ್ರಹರೂಪದಲ್ಲಿ ಮಹರ್ಷಿ ವಿದ್ಯಾರಣ್ಯರು (ಸಾಯಣ-ಮಾಧವರು) “ಸರ್ವದರ್ಶನ-ಸಂಗ್ರಹಃ” ಎಂಬ ಕೃತಿಯಲ್ಲಿ ಸರಳವಾಗಿ ಹೆಕ್ಕಿಕೊಟ್ಟಿದ್ದಾರೆ. ಹೀಗೆ, ವಿದ್ಯಾರಣ್ಯರ ಈ ಗ್ರಂಥದ ಆಧಾರದಲ್ಲಿ ದರ್ಶನಶಾಸ್ತ್ರಗಳ ಬಗ್ಗೆ ವಿವರವಾಗಿ, ಸರಳವಾಗಿ ಚರ್ಚಿಸೋಣ.

ಚಾರ್ವಾಕದರ್ಶನಮ್

ನಿತ್ಯಜ್ಞಾನಾಶ್ರಯಂ ವನ್ದೇ ನಿಃಶ್ರೇಯಸನಿಧಿಂ ಶಿವಮ್ |
ಯೇನೈವ ಜಾತಂ ಮಹ್ಯಾದಿ ತೇನೈವೇದಂ ಸಕರ್ತೃಕಮ್ || ೧ ||
ಪಾರಂ ಗತಂ ಸಕಲದರ್ಶನಸಾಗರಾಣಾ-
-ಮಾತ್ಮೋಚಿತಾರ್ಥಚರಿತಾರ್ಥಿತಸರ್ವಲೋಕಮ್ |
ಶ್ರೀಶಾರ್ಙ್ಗಪಾಣಿತನಯಂ ನಿಖಿಲಾಗಮಜ್ಞಂ
ಸರ್ವಜ್ಞವಿಷ್ಣುಗುರುಮನ್ವಹಮಾಶ್ರಯೇऽಹಮ್ || ೨ ||
ಶ್ರೀಮತ್ಸಾಯಣದುಗ್ಧಾಬ್ಧಿಕೌಸ್ತುಭೇನ ಮಹೌಜಸಾ |
ಕ್ರಿಯತೇ ಮಾಧವಾರ್ಯೇಣ ಸರ್ವದರ್ಶನಸಙ್ಗ್ರಹಃ || ೩ ||

ಬೃಹಸ್ಪತಿಮತಾನುಸಾರಿಯಾದ ನಾಸ್ತಿಕಶಿರೋಮಣಿಯೆನಿಸಿದ ಚಾರ್ವಾಕನಿಂದ ಪರಮೇಶ್ವರನು ದೂರ ಇಡಲ್ಪಟ್ಟ ಕಾರಣ, ಪರಮೇಶ್ವರನಿಗೆ ಮುಕ್ತಿದಾಯಕನೆಂದು ಹೇಗೆ ತಾನೇ ಹೇಳಲು ಸಾಧ್ಯ? ಅರ್ಥಾತ್ ಚಾರ್ವಾಕದರ್ಶನದಿಂದಲೇ ಪರಮಾನಂದ / ಮುಕ್ತಿಯೆಂದು ಹೇಳಿದೆ.
ಯಾವಜ್ಜೀವಂ ಸುಖಂ ಜೀವೇನ್ನಾಸ್ತಿ ಮೃತ್ಯೋರಗೋಚರಃ |
ಭಸ್ಮೀಭೂತಸ್ಯ ದೇಹಸ್ಯ ಪುನರಾಗಮನಂ ಕುತಃ ||
ಎಂಬ ಲೋಕರೂಢಿಯ ಮಾತಿನಂತೆ, ಬದುಕಿದ್ದಷ್ಟು ಕಾಲ ಸುಖವಾಗಿರಬೇಕು. ಮರಣದ ಬಳಿಕ ಅಗೋಚರವಾದ ಯಾವುದೂ ಇಲ್ಲ. ದೇಹವು ದಹನಕರ್ಮದಿಂದ ಭಸ್ಮವಾದಮೇಲೆ, ಪುನಃ ಎಲ್ಲಿಂದ ತಾನೇ ಮರಳಿಬಂದೀತು? ಇದರಂತೆಯೇ, ಕೇವಲ ಲೌಕಿಕಪರವಾದ ನೀತಿ-ಕಾಮಶಾಸ್ತ್ರಾದಿಗಳ ಆಧಾರದಿಂದ, ಅರ್ಥ-ಕಾಮಗಳೇ ಪರಮಪುರುಷಾರ್ಥಗಳೆಂದು ಬಗೆದವರಾಗಿ, ಪಾರಲೌಕಿಕ ಸದ್ಗತಿಯ ಕುರಿತು ಅಪಲಾಪ / ತಿರಸ್ಕಾರಹೊಂದಿದವರಾಗಿ, ಚಾರ್ವಾಕಮತಾನುಯಾಯಿಗಳು ಲೌಕಿಕ ಬದುಕನ್ನನುಭವಿಸುವರು. ಹಾಗಾಗಿಯೇ ಇದಕ್ಕೆ “ಲೋಕಾಯತದರ್ಶನ”ವೆಂಬ ಅನ್ವರ್ಥವಾದ ಇನ್ನೊಂದು ಹೆಸರಿರುವುದು. 
      “ಲೋಕೇಷು ಆಯತಂ ವಿಸ್ತೀರ್ಣಮ್ ಇವ ಇತಿ ಲೋಕಾಯತಮ್”— ಲೋಕದಲ್ಲಿ ಬಹುವಿಸ್ತಾರವಾಗಿ ಜನಸಾಮಾನ್ಯರಲ್ಲೂ ಹಬ್ಬಿರುವ ನಾಸ್ತಿಕತೆಯ ನಂಬಿಕೆಯಿಂದಾಗಿ ಚಾರ್ವಾಕದರ್ಶನವು ಲೋಕಾಯತವೆನಿಸಿದೆ. “ಚಾರುಃ, ರಮಣೀಯಃ, ವಾಕ್, ಉಕ್ತಿಃ ಯಸ್ಯ ಸಃ ಚಾರ್ವಾಕಃ”— ಸುಂದರ, ರಮಣೀಯ, ಮನೋಹರವಾದ ಮಾತು ಯಾವನದೋ ಆತನು ಚಾರು-ವಾಕ್ ಉಳ್ಳ ಚಾರ್ವಾಕನು. “ಚಾರುಃ”— ಎಂದರೆ “ಚರತಿ ದೇವೇಷು ಗುರುತ್ವೇನ”— ದೇವತೆಗಳಲ್ಲಿ ಗುರುವೆಂದು ಆಚರಿಸಲ್ಪಡುವ ಬೃಹಸ್ಪತಿ. ಆತನ ಮತವೂ ಒಂದು ಕಾಲದಲ್ಲಿ ಅಸುರಮೋಹನಕ್ಕಾಗಿ “ಚಾರ್ವಾಕಮತ”ವೆನಿಸಿದೆ. ದುಷ್ಟರು ಧರ್ಮಸಾಧನೆಯ ಬಲದಿಂದ ಲೋಕಹಾನಿ ಮಾಡುವಾಗ, ಅವರನ್ನು ಧರ್ಮಪಥಚ್ಯುತರನ್ನಾಗಿಸಲು ಭಗವಂತನೇ ಹೂಡಿದ ಉಪಾಯವಿದು. ಧರ್ಮಭ್ರಷ್ಟರಾದರೆ, ದುಷ್ಟರ ನಿಗ್ರಹ ಸುಲಭಸಾಧ್ಯವಾಗುತ್ತದೆ ಎಂಬುದಕ್ಕಾಗಿ. “ಚರತಿ ಚಿತ್ತೇ ಇತಿ ವಾ ಚಾರುಃ”— ಮನದಲ್ಲಿ ಮತ್ತೆ ಮತ್ತೆ ಅದನ್ನು ನೋಡಬೇಕು, ಕೇಳಬೇಕೆಂಬ ಚಿಂತನೆಯು ಸದಾ ಚರಿಸುವಂತಹ ಆಕರ್ಷಕ, ಮನೋಹರ ಗುಣ-ರೂಪಾದಿಗಳಿಗೂ ಚಾರು ಎನ್ನಲಾಗಿದೆ. 
     ಇಲ್ಲಿ ಹೇಳಿರುವ ಚಾರ್ವಾಕನು ಬೃಹಸ್ಪತಿಯ ಶಿಷ್ಯನು. ಇವನ ಮಾತುಗಳ ಅಂತಿಮ ಪರಿಣಾಮವು ದುಃಖವೇ ಆದರೂ, ಅದನ್ನು ಕೇಳುವ ಸಮಯದಲ್ಲಿ ಶ್ರೋತೃಗಳ ಮನಸ್ಸನ್ನು ರಂಜಿಸುವುದರಿಂದ ಅದರಲ್ಲಿ ರಮಣೀಯತೆಯಿದೆ. ಈ ಚಾರ್ವಾಕಮತವನ್ನು ಲೋಕದಲ್ಲಿ ಪೂರ್ಣವಾಗಿ ನಾಶಪಡಿಸಲು ಸಾಧ್ಯವಿಲ್ಲ. ಯಾಕೆಂದರೆ, ಯಾವುದೇ ಉಪದೇಶವಿಲ್ಲದೆಯೇ, ಜನರು ಸ್ವಭಾವಸಹಜವಾಗಿ ಆ ಮತವನ್ನಾಚರಿಸುವವರೇ ಹೌದು. ಪುಣ್ಯ-ಪಾಪಗಳು ಹಾಗೂ ಅವುಗಳ ಲೌಕಿಕ-ಪಾರಲೌಕಿಕ ಫಲಗಳು ಪ್ರತ್ಯಕ್ಷಗೋಚರವಲ್ಲದುದರಿಂದ ಅವುಗಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೆ ವಿಶ್ವಾಸವಿರುವುದಿಲ್ಲ. ತಪಸ್ಸೇ ಮುಂತಾದ ಕಠಿಣವ್ರತಗಳನ್ನಾಚರಿಸಿದರೂ ಜೀವನದಲ್ಲಿ ಮರಣವು ತಪ್ಪಿದ್ದಲ್ಲ. ಹಾಗಾಗಿ, ಸಾಧ್ಯವಾದಷ್ಟು ಸುಖವನ್ನನುಭವಿಸಬೇಕು. ಜನ್ಮಾಂತರದಲ್ಲಿ ಅತಿಶಯಸುಖಪ್ರಾಪ್ತಿಗಾಗಿ ಕಷ್ಟಪಡಬೇಕೆನ್ನುವವರಿಗೆ “ಭಸ್ಮವಾದ ಶರೀರವು ಪುನಃ ಹೇಗೆ ತಾನೇ ಬರುವುದು?” ಎಂಬ ಉತ್ತರವಿದೆ. ದೇಹದ ಹೊರತಾದ ಆತ್ಮವೆಂಬುದು ಕಾಣದಿರುವುದರಿಂದ, ದೇಹವೇ ಆತ್ಮಾ. ದೇಹವಾದರೋ ಸತ್ತಾಗ ಭಸ್ಮಮಾಡಲ್ಪಡುವುದು. ಹಾಗಾಗಿ, ಪರಲೋಕಗತಿಯ ಮಾತಾಗಲೀ ಜನ್ಮಾಂತರಪ್ರಾಪ್ತಿಯ ಮಾತಾಗಲೀ ಎಲ್ಲಿಂದ ತಾನೇ ಬರುವುದು? ಅದಕ್ಕಾಗಿ ಕಷ್ಟಪಡುವುದು ವ್ಯರ್ಥ. ಹಾಗಾಗಿಯೇ ಲೌಕಿಕಸುಖಪ್ರಾಪ್ತಿಗಾಗಿ ಅರ್ಥಕಾಮಗಳೇ ಲೋಕದಲ್ಲಿ ಸ್ವಾಭಾವಿಕವಾಗಿ ಕಂಡುಬರುವುದು. ದ್ರವ್ಯಸಂಗ್ರಹ ಹಾಗೂ ವಿಷಯೋಪಭೋಗಗಳೇ ಅರ್ಥಕಾಮಗಳೆಂಬ ಪುರುಷಾರ್ಥಗಳ ಗುರಿಯು. ಹಾಗಾಗಿಯೇ ಈ ಲೋಕಾಯತಮತವು ಲೋಕದೆಲ್ಲೆಡೆ ವಿಸ್ತಾರವಾಗಿ ಹಬ್ಬಿರುವುದು.
    ಆಕಾಶವು ಪ್ರತ್ಯಕ್ಷ ಕಾಣದಿರುವುದರಿಂದ / ಅನುಭವಕ್ಕೆ ಬರದಿರುವುದರಿಂದ, ಪೃಥ್ವಿ, ನೀರು, ಅಗ್ನಿ, ವಾಯು— ಎಂಬ ನಾಲ್ಕುತತ್ತ್ವಗಳನ್ನು ಮಾತ್ರ ಪ್ರತ್ಯಕ್ಷಮಾತ್ರವಾದಿಗಳಾದ ಚಾರ್ವಾಕರು ನಂಬುತ್ತಾರೆ. ಈ ನಾಲ್ಕರ ವಿಶೇಷ ಸಂಯೋಗದಿಂದ ಉಂಟಾದ ದೇಹದಲ್ಲಿ ಚೈತನ್ಯವೂ ಇವುಗಳಿಂದಲೇ ಮೂಡುತ್ತದೆ. ಹಾಗಾಗಿ, ಶರೀರವು ನಾಶವಾಗಲು, ಚೈತನ್ಯವೂ ಇಲ್ಲವಾಗುವುದು. ಚೈತನ್ಯವೆಂದರೆ ಜ್ಞಾನ. ಪ್ರಾಣಬಿಟ್ಟ ಮೇಲೆ ಯಾವುದೇ ಜ್ಞಾನವಿರದು. ಆ ಜ್ಞಾನವು ಶರೀರ ಬಿಟ್ಟಮೇಲೆ ಶರೀರವು ನಶಿಸುವುದು. ಹಾಗಾಗಿ, ಮರಣಾನಂತರ “ಪ್ರೇತ”ವೆಂಬ ಸಂಜ್ಞೆಯೇ ಇಲ್ಲ. (ಪ್ರ ಇತಃ— ಇಲ್ಲಿಂದ ಹೊರಟವನು ಪ್ರೇತನು. ಚಾರ್ವಾಕರಲ್ಲಿ ಮರಣಾನಂತರ ಹೊರಡುವಿಕೆಯೆಂಬುದಿಲ್ಲ. ಹೊರಡಲು ಏನೂ ಉಳಿದಿಲ್ಲ.) ಹಾಗಾಗಿ, ಆ ಚೈತನ್ಯದಿಂದ ಕೂಡಿ ವಿಶಿಷ್ಟವಾದ ದೇಹವೇ ಆತ್ಮನು. ದೇಹವನ್ನು ಹೊರತುಪಡಿಸಿದ ಆತ್ಮಕ್ಕೆ ಪ್ರಮಾಣ / ವೈಜ್ಞಾನಿಕ ಆಧಾರ / ಪುರಾವೆಯಿಲ್ಲ. ಪ್ರತ್ಯಕ್ಷಪ್ರಮಾಣವನ್ನು ಮಾತ್ರ ಚಾರ್ವಾಕರು ಅಂಗೀಕರಿಸುವರು. ಅನುಮಾನಾದಿಗಳನ್ನು ಸ್ವೀಕರಿಸುವುದಿಲ್ಲ.

ವಿಶೇಷ ವಿಚಾರ— 
        ಪ್ರಮಾಣಗಳು:— ಪ್ರ-ಮಾ ಎಂದರೆ ಪ್ರಕೃಷ್ಟ / ಉತ್ಕೃಷ್ಟ / ಶ್ರೇಷ್ಠ / ಸಮ್ಯಕ್ ಜ್ಞಾನ. ಪ್ರಮಾಣವೆಂದರೆ ಸರಿಯಾದ ಜ್ಞಾನದ ಅನುಭವವನ್ನುಂಟುಮಾಡಲು ಇರುವ ಸಾಧನ ಅಥವಾ ಜ್ಞಾನಸಾಧನ. “ಪ್ರಮಾ ಕರಣಂ ಪ್ರಮಾಣಮ್” . ದರ್ಶನೋಕ್ತ ಪ್ರಮಾಣಗಳು ೮ ವಿಧ.
೧) ಪ್ರತ್ಯಕ್ಷ
೨) ಅನುಮಾನ
೩) ಆಗಮ
೪) ಉಪಮಾನ
೫) ಅರ್ಥಾಪತ್ತಿ
೬) ಅನುಪಲಬ್ಧಿ
೭) ಸಂಭವ ಹಾಗೂ
೮) ಐತಿಹ್ಯ.

೧) ಪ್ರತ್ಯಕ್ಷ ಪ್ರಮಾಣ—
  • “ಇಂದ್ರಿಯಾರ್ಥ-ಸನ್ನಿಕರ್ಷ-ಜನ್ಯಂ ಜ್ಞಾನಂ ಪ್ರತ್ಯಕ್ಷಮ್”— ಇಂದ್ರಿಯ ಹಾಗೂ ವಸ್ತುಗಳ ಸಂಪರ್ಕದಿಂದ ಉಂಟಾದ ಜ್ಞಾನವು ಪ್ರತ್ಯಕ್ಷ (—ನೈಯಾಯಿಕಮತ; ನ್ಯಾಯದಾರ್ಶನಿಕರ ಮತ).
  • “ಕಲ್ಪನಾಪೋಢಂ ಪ್ರತ್ಯಕ್ಷಮ್”— ಶಬ್ದ ಪ್ರಯೋಗದಿಂದ ಕೂಡಿದ ತಿಳುವಳಿಕೆಗೆ “ಕಲ್ಪನಾ” ಎನ್ನುವರು. “ಅಪೋಢ” ಎಂದರೆ ರಹಿತ / ಇಲ್ಲದ ಎಂದರ್ಥ. “ಶಬ್ದಸಂಸರ್ಗವತೀ ಪ್ರತೀತಿಃ ಕಲ್ಪನಾ, ತಯಾ ಅಪೋಢಂ ರಹಿತಂ ವಾ ಪ್ರತ್ಯಕ್ಷಮ್”— ಶಬ್ದಾದಿ ಸಂಸರ್ಗಗಳಿಲ್ಲದ, ವಸ್ತುವಿನ ನೇರವಾದ ಆಕೃತಿಯಜ್ಞಾನವು ಪ್ರತ್ಯಕ್ಷವು. ಎಲ್ಲವೂ ಕ್ಷಣಿಕ. ಯಾವ ವಸ್ತುವೂ ಒಂದು ಕ್ಷಣ ಇದ್ದಂತೆ ಇನ್ನೊಂದು ಕ್ಷಣದಲ್ಲಿ ಇರದು. ಹಾಗಾಗಿ, ವಸ್ತುವೊಂದನ್ನು ಹೀಗೇ ಇದೆಯೆಂದು ಶಬ್ದದಿಂದ ನಿರ್ದೇಶಿಸಲಾಗದು. ಹಾಗಾಗಿ, ಪ್ರತ್ಯಕ್ಷಜ್ಞಾನವು ಶಬ್ದವಿವರಣೆ-ಕಲ್ಪನೆಗಳಿಗೆ ನಿಲುಕದ ನೇರ ತಿಳುವಳಿಕೆ. (—ಬೌದ್ಧಮತ).
  • “ಸಮ್ಯಗ್ ಅಪರೋಕ್ಷಾನುಭವಃ ಪ್ರತ್ಯಕ್ಷಮ್”— ಸರಿಯಾದ / ಚೆನ್ನಾದ, ಪರೋಕ್ಷವಲ್ಲದ ಅನುಭವವೇ ಪ್ರತ್ಯಕ್ಷ (—ಅದ್ವೈತಮತ).
  • “(ಪ್ರತಿ + ಅಕ್ಷಮ್— ಪ್ರತ್ಯಕ್ಷಮ್) ಪ್ರತಿ, ವಿಷಯಂ ಪ್ರತಿ, ಗತಂ ಅಕ್ಷಂ / ಇಂದ್ರಿಯಂ, ಯಸ್ಯ ಪ್ರಯೋಜನಾಯ ತತ್ ಪ್ರತ್ಯಕ್ಷಮ್”— ಎಂಬುದು ಪ್ರತ್ಯಕ್ಷಪದಕ್ಕೆ ವ್ಯುತ್ಪತ್ತಿ. ವಿಷಯಗಳನ್ನು ಇಂದ್ರಿಯಗಳ ಮೂಲಕ ತಿಳಿಯುವುದು ಪ್ರತ್ಯಕ್ಷಪ್ರಮಾಣವು.
  • *ಸನ್ನಿಕರ್ಷಗಳು—* ಸನ್ನಿಕರ್ಷ ಎಂದರೆ ಸಂಬಂಧ / ನಿಕಟತೆ / ಸಂಪರ್ಕ / ಸಾನ್ನಿಧ್ಯ / ಸಾಮೀಪ್ಯ. *ಅರ್ಥ* ಎಂದರೆ ವಿಷಯ / ವಸ್ತು. ಹೀಗಾಗಿ, ದರ್ಶನಗಳಲ್ಲಿ ಸನ್ನಿಕರ್ಷಗಳೆಂದರೆ  *“ವಿಷಯೇಂದ್ರಿಯಸಂಬಂಧಃ ಸನ್ನಿಕರ್ಷಃ | ಸ ಚ ಜ್ಞಾನಸ್ಯ ಕಾರಣಮ್ ||”* —ನಾನಾ ವಿಷಯ ವಸ್ತುಗಳು (ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳೆಂಬ ಪಂಚ ತನ್ಮಾತ್ರೆಗಳು) ಹಾಗೂ ಇಂದ್ರಿಯಗಳ (ಅನುಕ್ರಮವಾಗಿ ಕಿವಿ, ಚರ್ಮ, ಕಣ್ಣು, ನಾಲಗೆ, ಮೂಗು ಎಂಬ ಪಂಚ ಜ್ಞಾನೇಂದ್ರಿಯಗಳು) ವಿವಿಧ ರೀತಿಯ ಸಂಬಂಧ ಸಾಮೀಪ್ಯಗಳು. ಇವು ವಸ್ತುಗಳ ಬಗೆಗಿನ ಜ್ಞಾನಕ್ಕೆ ಕಾರಣವಾಗುತ್ತವೆ. ಇವು ೨ ವಿಧ— ಲೌಕಿಕ, ಅಲೌಕಿಕ. *ಲೌಕಿಕ ಸನ್ನಿಕರ್ಷಗಳು ೬ ವಿಧ.*
*೧) ಇಂದ್ರಿಯ ಸಂಯೋಗ ಸನ್ನಿಕರ್ಷ* ದಿಂದ ವಸ್ತುವಿನ ಪ್ರತ್ಯಕ್ಷಗೋಚರವಾಗುತ್ತದೆ.
*೨) ಇಂದ್ರಿಯ ಸಂಯುಕ್ತ ಸಮವಾಯ ಸನ್ನಿಕರ್ಷ*  ದಿಂದ ವಸ್ತುವಿನಲ್ಲಿರುವ ರೂಪ, ಗುಣ, ಕರ್ಮ, ಜಾತಿ ( *ಜಾತಿ* = ಒಂದೇ ರೀತಿಯ ಲಕ್ಷಣಗಳುಳ್ಳ ಗುಂಪು. ಉದಾ—  ರೂಪದ ರೂಪತ್ವ, ಶಬ್ದದ ಶಬ್ದತ್ವ, ರಸದ ರಸತ್ವ, ಸ್ಪರ್ಶದ ಸ್ಪರ್ಶತೆ, ಗಂಧದ ಗಂಧತ್ವ)ಗಳನ್ನು ಗ್ರಹಿಸುತ್ತೇವೆ.
*೩) ಇಂದ್ರಿಯ ಸಂಯುಕ್ತ ಸಮವೇತ ಸಮವಾಯ ಸನ್ನಿಕರ್ಷ* ದಿಂದ ವಸ್ತುವಿನ ರೂಪತ್ವ / ಜಾತಿಯು ಪ್ರತ್ಯಕ್ಷವಾಗುವುದು.
*೪) ಶ್ರೋತ್ರಾದಿ ಸಮವಾಯ ಸನ್ನಿಕರ್ಷ* ವು ಶಬ್ದ (ಗುಣ) ಹಾಗೂ ಶ್ರವಣೇಂದ್ರಿಯವಾದ ಕಿವಿ (ಗುಣೀ)ಗಿರುವ ಸಂಬಂಧ. ಶಬ್ದವು ಆಕಾಶದ ಗುಣ. ಕಿವಿಯ ಜಾಗದಲ್ಲಿರುವ ಅವಕಾಶವೇ / ಆಕಾಶವೇ ಶ್ರೋತ್ರೇಂದ್ರಿಯ / ಶ್ರವಣೇಂದ್ರಿಯ. *ಗುಣಗುಣಿನೋಃ ಸಮವಾಯಃ*— ಗುಣ-ಗುಣಿಗಳ ಸಮವಾಯ / ಸೇರುವಿಕೆ.
*೫) ಶ್ರೋತ್ರಾದಿ ಸಮವೇತ ಸಮವಾಯ ಸನ್ನಿಕರ್ಷ* ದಿಂದ ಶಬ್ದತ್ವವು ಪ್ರತ್ಯಕ್ಷವಾಗುತ್ತದೆ. ಶ್ರೋತ್ರೇಂದ್ರಿಯದೊಡನೆ ಶಬ್ದವು ಸಮವಾಯದಿಂದ ಇದೆ (ಮೇಲಿನ ೪ನೇ ಸನ್ನಿಕರ್ಷ). ಶಬ್ದದಲ್ಲಿ ಶಬ್ದತ್ವವು ಸಮವೇತವಾಗಿದೆ / ಸೇರಿದೆ. 
*೬) ತದಾದಿ ವಿಶೇಷಣತಾ ತಾದಾತ್ಮ್ಯ ಸನ್ನಿಕರ್ಷ* ವು ವಾಸ್ತವದಲ್ಲಿ ಆಂತರಿಕ ಪ್ರತ್ಯಕ್ಷಕ್ಕೆ ಸಂಬಂಧಿಸಿದ್ದು. ತಾದಾತ್ಮ್ಯವೆಂದರೆ ತದ್ ಆತ್ಮ್ಯ ಭಾವ— ಅದೇ ಇದೆಂಬ ಭಾವ. ಒಂದು ರೀತಿಯ ಆರೋಪಾತ್ಮಕ ಜ್ಞಾನ. ಉದಾ— *“ಕಾದ ಕಬ್ಬಿಣವು ಸುಡುತ್ತದೆ.”* ವಸ್ತುತಃ ಸುಡುವ ಶಕ್ತಿ ಬೆಂಕಿಯದು. ಆದರೆ ಈ ಶಕ್ತಿಯನ್ನು ಕಾದಿರುವ ಕಬ್ಬಿಣಕ್ಕೆ ಆರೋಪಿಸಲಾಗಿದೆ. ಇಂತಹ ಜ್ಞಾನವು ತಾದಾತ್ಮ್ಯ ಸನ್ನಿಕರ್ಷಜನ್ಯವಾದದ್ದು. ಇದು ಬುದ್ಧಿ (ಆತ್ಮ) ನಿಷ್ಠವಾದುದು. “ಇದರಿಂದ ನಾನು ಸುಖಿಯಾಗಿದ್ದೇನೆ, ನಾನು ದುಃಖದಿಂದ ಕೂಡಿದ್ದೇನೆ”— ಇತ್ಯಾದಿ ಅನುಭವವು ತಾದಾತ್ಮ್ಯದಿಂದ ಬುದ್ಧಿ, ಮನಸ್ಸು, ಅಂತಃಕರಣ ಮೊದಲಾದ ಅಂತರಿಂದ್ರಿಯಗಳಿಗೆ ತಿಳಿಯುತ್ತದೆ. 
*ಅಲೌಕಿಕ ಸನ್ನಿಕರ್ಷಗಳು ೩ ವಿಧ.*— ಸಾಮಾನ್ಯಲಕ್ಷಣಾ, ಜ್ಞಾನಲಕ್ಷಣಾ ಹಾಗೂ ಯೋಗಜಾ ಎಂಬುದಾಗಿ. ಯೋಗಜಾ ೨ ವಿಧ— ಯುಕ್ತ ಹಾಗೂ ಯುಂಜಾನ ಎಂದು. 

Comments

  1. ಗುರುಗಳೇ, ನಿಮ್ಮ ಲೇಖನಗಳನ್ನು ಓದಿದ ನನಗೆ ಸಂಸ್ಕೃತದ ವಿಷಯಗಳನ್ನು ಅವಲಂಬಿಸಿ ಕನ್ನಡದಲ್ಲಿ ಲೇಖನಗಳನ್ನು ಬರೆಯುವ ಮಹದಭಿಲಾಷೆಯು ಒಂದು ದೊಡ್ಡ ಸಾಹಸವೆನಿಸಿ, ಅದರಲ್ಲಿರುವ ಉತ್ಸಾಹವೇ ಕುಂಠಿತವಾಯಿತು. ನಾನೂಸಹ ಸಂಸ್ಕೃತದ ಕೆಲವು ವಿಚಾರಗಳನ್ನಾದರಿಸಿ ಕನ್ನಡದಲ್ಲಿ ಲೇಖನಗಳನ್ನು ಬರೆಯುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ. ಅಲ್ಪತಿಳುವಳಿಕೆ ಇರುವ ನನ್ನ ಈ ಪ್ರಯತ್ನ ಅಮೂಲ್ಯವಾದ ನಿಮ್ಮ ವಿವರಣಾಕೌಶಲದ ಮುಂದೆ ಸೂರ್ಯನ ಎದುರಿಗೆ ಹಿಡಿದ ಲಘು ಹಣತೆಯಾದೀತು. ಆದರೂ ನನ್ನ ತಿಳುವಳಿಕೆಯ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಹಾಗೂ ಓದಿದ ವಿದ್ಯೆಯ ಸಾರ್ಥಕತೆಗಾಗಿ ಈ ಸಾಹಸಕ್ಕೆ ಕೈ ಹಾಕಿದ್ದೇನೆ. ದಯವಿಟ್ಟು ನನ್ನ ಲೇಖನಗಳನ್ನು ಓದಿ ನನ್ನನ್ನು ಆಶಿರ್ವದಿಸಿ, ನನ್ನ ತಪ್ಪುಗಳನ್ನು ತಿದ್ದಿ ಅನುಗ್ರಹಿಸಿರಿ.
    https://sugamyavicharasangraha.blogspot.com/2019/12/
    ನಿಮ್ಮ ಲೇಖನಾಭಿಮಾನೀ ನಾರಾಯಣ.

    ReplyDelete
  2. ಓಂ ನಮೋ ನಾರಾಯಣಾಯ..ತಮ್ಮ ಅಭಿಮಾನಕ್ಕೆ ಚಿರಋಣಿ. ತಮ್ಮ ಶುಭಹಾರೈಕೆಗಳೇ ನನಗೆ ಸ್ಫೂರ್ತಿ. ನನ್ನೀ ಸರಸ್ವತೀಸೇವೆಯು ತಮ್ಮಂಥ ಮಹನೀಯರಿಗೂ ಸ್ಫೂರ್ತಿಯಾದರೆ ನಾನು ಧನ್ಯನಾದೆ.

    ReplyDelete

Post a Comment

Popular posts from this blog

ಬ್ರಹ್ಮಸೂತ್ರಗಳ ಸರಳಾನುವಾದ, ಪ್ರತಿಪದಾರ್ಥ ಮತ್ತು ತಾತ್ಪರ್ಯ

ಬ್ರಹ್ಮಸೂತ್ರಗಳ ಸರಳಾನುವಾದ, ಪ್ರತಿಪದಾರ್ಥ ಮತ್ತು ತಾತ್ಪರ್ಯ ಅಧ್ಯಾಯ ೧ (ಉಪನಿಷದ್ವಾಕ್ಯಗಳೆಲ್ಲ ಬ್ರಹ್ಮವನ್ನೆ ಹೇಳುವುವೆಂದು ತೋರಿಸುವುದು) ಪಾದ ೧ (ಬ್ರಹ್ಮವನ್ನು ಗುರುತಿಸುವ ಸ್ಪಷ್ಟವಾದ ಮಾತುಗಳುಳ್ಳ ವಾಕ್ಯಗಳ ವಿಚಾರ) ೧. ಜಿಜ್ಞಾಸಾಧಿಕರಣ (ಅಧಿಕಾರಿಯು ಮುಕ್ತಿಗಾಗಿ ಬ್ರಹ್ಮವಿಚಾರವನ್ನು ಮಾಡಬೇಕು) ಸೂತ್ರ ೧. ಅಥಾತೋ ಬ್ರಹ್ಮಜಿಜ್ಞಾಸಾ  ★ ಸರಳಾನುವಾದ— ಬ್ರಹ್ಮವಿಚಾರವನ್ನು ಮಾಡಬೇಕು. ★ ಪ್ರತಿಪದಾರ್ಥ—  ಅಥ— ಅನಂತರ, ಆಮೇಲೆ, ತತ್ಪಶ್ಚಾತ್, ಆ ಬಳಿಕ, ತದನಂತರ, ತರುವಾಯ. ಅತಃ— ಆದಕಾರಣ, ಆದುದರಿಂದ, ಆದ್ದರಿಂದ, ಹಾಗಾಗಿ, ಹೀಗಾಗಿ, ಅದರಿಂದಾಗಿ, ಇದರಿಂದಾಗಿ, ಇದಕ್ಕೋಸ್ಕರ. ಬ್ರಹ್ಮಜಿಜ್ಞಾಸಾ— ಬ್ರಹ್ಮವನ್ನು ಅರಿತುಕೊಳ್ಳಲು ಬಯಸಬೇಕು, ಇಚ್ಛಿಸಬೇಕು. “ಜ್ಞಾತುಮ್ ಇಚ್ಛಾ ಜಿಜ್ಞಾಸಾ”— ತಿಳಿಯಲು ಇಚ್ಛೆಯೇ (ಹಂಬಲವೇ) ಜಿಜ್ಞಾಸೆಯು. “ಬ್ರಹ್ಮಣಃ ಜಿಜ್ಞಾಸಾ ಬ್ರಹ್ಮಜಿಜ್ಞಾಸಾ”— ಬ್ರಹ್ಮದ ಕುರಿತಾದ ಜಿಜ್ಞಾಸೆಯೇ ಬ್ರಹ್ಮಜಿಜ್ಞಾಸೆಯು.  ★ ತಾತ್ಪರ್ಯ— ನಿತ್ಯ-ಅನಿತ್ಯ / ಆತ್ಮ-ಅನಾತ್ಮ / ಸತ್ಯ-ಮಿಥ್ಯಾ ವಸ್ತುವಿವೇಚನೆ, ಇಹ-ಪರ ಸುಖಗಳನ್ನು ಬಯಸದಿರುವುದು, ಇಂದ್ರಿಯ-ಮನೋನಿಗ್ರಹ, ಮೋಕ್ಷಾಕಾಂಕ್ಷೆಗಳೆಂಬ  ಸಾಧನಚತುಷ್ಟಯವನ್ನು ಸಂಪಾದಿಸಿಕೊಂಡಮೇಲೆ, ಬ್ರಹ್ಮಜ್ಞಾನದಿಂದಲೇ ಪರಮಪುರುಷಾರ್ಥವಾದ ಮೋಕ್ಷವು ದೊರೆಯುತ್ತದೆಯಾದಕಾರಣ, ಬ್ರಹ್ಮಜಿಜ್ಞಾಸೆಯನ್ನು ಮಾಡಬೇಕು. ೨. ಜನ್ಮಾದ್ಯಧಿಕರಣ (ಬ್ರಹ್ಮದ ಲಕ್ಷಣ) ಸೂತ್ರ ೨. ...

ಬ್ರಹ್ಮಸೂತ್ರಭಾಷ್ಯಸಮುಚ್ಚಯಃ ೧

ಬ್ರಹ್ಮಸೂತ್ರಭಾಷ್ಯಸಮುಚ್ಚಯಃ ೧ ಶ್ರೀಗಣೇಶಾಯ ನಮಃ ಶ್ರೀಗುರುಭ್ಯೋ ನಮಃ ಓಂ ಪರಬ್ರಹ್ಮಣೇ ನಮಃ ಪ್ರಸ್ತಾವನೆ ಕಪಿಲಮುನಿಗಳ ಸಾಂಖ್ಯ , ಕಣಾದರ ವೈಶೇಷಿಕ , ಪತಂಜಲಿಗಳ ಯೋಗ , ಜೈಮಿನಿಗಳ ಪೂರ್ವಮೀಮಾಂಸೆ (ಕರ್ಮಕಾಂಡ) ಹಾಗೂ ಬಾದರಾಯಣ ವ್ಯಾಸರ ಉತ್ತರಮೀಮಾಂಸೆ (ಜ್ಞಾನೋಪಾಸನಾಕಾಂಡ — ಬಾದರಾಯಣಸೂತ್ರ / ವೇದಾಂತಸೂತ್ರ / ಬ್ರಹ್ಮಸೂತ್ರ / ಶಾರೀರಕಮೀಮಾಂಸಾ)— ಇವು ಆರು, ಸಂಕ್ಷಿಪ್ತವಾಗಿ ಸೂತ್ರರೂಪದಲ್ಲಿರುವ, ಭಾರತೀಯ ತತ್ತ್ವಶಾಸ್ತ್ರದ ಅಡಿಗಲ್ಲುಗಳೆನಿಸಿದ ಷಡ್ದರ್ಶನವೆಂದು ಪ್ರಸಿದ್ಧವಾದವುಗಳಾಗಿವೆ. ಇವುಗಳಲ್ಲಿ ಆರನೆಯದೂ ಕೊನೆಯದೂ ಆಗಿರುವ, ಉಪನಿಷತ್-ಬ್ರಹ್ಮಸೂತ್ರ-ಭಗವದ್ಗೀತೆಗಳೆಂಬ ಪ್ರಸ್ಥಾನತ್ರಯದಲ್ಲೊಂದಾದ ಈ ಬ್ರಹ್ಮಸೂತ್ರವು, ವೇದಸಾರಭೂತವಾಗಿ ವೇದಾಂತವೆನಿಸಿದ ಉಪನಿಷತ್ತಿನ ಸಾರಸರ್ವಸ್ವವಾಗಿರುವುದು. ಹೀಗಾಗಿ ನಾವು ವೇದದ ತಾತ್ಪರ್ಯವನ್ನು ಉಪನಿಷತ್ತಿನಲ್ಲಿಯೂ, ಉಪನಿಷತ್ತಿನ ತಾತ್ಪರ್ಯವನ್ನು ಬ್ರಹ್ಮಸೂತ್ರದಲ್ಲಿಯೂ ಕಾಣಬೇಕು. ಹಾಗಾಗಿಯೇ, ವೇದಾರ್ಥವನ್ನು ಬ್ರಹ್ಮಸೂತ್ರದ ಚೌಕಟ್ಟಿನಲ್ಲಿ ಮನಗಾಣಬೇಕೆಂಬುದು ಪ್ರಾಜ್ಞರ ಮತ. "ಇತಿಹಾಸಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್" ಎಂಬಂತೆ, ಇತಿಹಾಸ-ಪುರಾಣಾದಿಗಳ ಜ್ಞಾನದಿಂದ ವೇದಾರ್ಥವನ್ನು ವಿಸ್ತರಿಸಬೇಕು. ಅದಕ್ಕೋಸ್ಕರ, ವೇದದ ಸಮಗ್ರಜ್ಞಾನವಾಗಬೇಕಿದ್ದರೆ ವೇದದ ಷಡಂಗಗಳ ಅಧ್ಯಯನ, ೪ ಉಪವೇದಗಳ ಅಧ್ಯಯನ, ಉಪನಿಷತ್-ಸ್ಮೃತಿ-ಪುರಾಣ-ಇತಿಹಾಸಗಳ ಅಧ್ಯಯನದೊಂದಿಗೆ ಬ್...